ವಿಚ್ಚೇದಿತ ಮುಸ್ಲಿಂ ಮಹಿಳೆಗೂ ಜೀವನಾಂಶದ ಹಕ್ಕು ಇದೆ: ಸುಪ್ರೀಂ ಮಹತ್ವದ ತೀರ್ಪು
ವಿಚ್ಚೇದಿತ ಮುಸ್ಲಿಂ ಮಹಿಳೆಗೂ ಜೀವನಾಂಶದ ಹಕ್ಕು ಇದೆ: ಸುಪ್ರೀಂ ಮಹತ್ವದ ತೀರ್ಪು
ವಿಚ್ಚೇದನ ಪಡೆದ ಮುಸ್ಲಿಂ ಮಹಿಳೆಯರೂ ಅಪರಾಧ ದಂಡ ಸಂಹಿತೆಯ ಸೆಕ್ಷನ್ 125ರ ಅನ್ವಯ ವಿಚ್ಚೇದಿತ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುಳ್ಳವರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಆಗಸ್ಟಿನಾ ಜಾರ್ಜ್ ಮಾಸಿಹ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಮುಸ್ಲಿಂ ಮಹಿಳೆಯರ (ವಿಚ್ಚೇದನ ವೇಳೆ ಹಕ್ಕುಗಳ ರಕ್ಷಣೆ) ಕಾಯ್ದೆ 1986 ಎಂಬ ಕಾನೂನು ಈ ನೆಲದ ಜಾತ್ಯತೀತ ಕಾನೂನುಗಳ ವ್ಯಾಪ್ತಿಯಲ್ಲೇ ಬರುತ್ತದೆ. ಜೀವನಾಂಶ ಎಂಬುದು ದತ್ತಿಯಲ್ಲ. ಅದು ಎಲ್ಲ ವಿವಾಹಿತ ಮಹಿಳೆಯರ ಹಕ್ಕು ಎಂದು ಪೀಠ ಸ್ಪಷ್ಟಪಡಿಸಿತು.
ಜೀವನಾಂಶ ಕುರಿತು ಮುಸ್ಲಿಂ ಮಹಿಳೆಯರಿಗಾಗುವ ತಾರತಮ್ಯವು ಲಿಂಗ ಸಮಾನತೆಯ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ ನ್ಯಾಯಪೀಠ, ಎಲ್ಲ ಧರ್ಮಕ್ಕೆ ಸೇರಿದ ವಿವಾಹಿತೆಯರಿಗೆ ಧಾರ್ಮಿಕ ತಟಸ್ಥ ನಿಯಮ ಅನ್ವಯವಾಗಲಿದೆ ಎಂದು ನ್ಯಾಯಪೀಠದಲ್ಲಿದ್ದ ನ್ಯಾ. ಬಿ.ವಿ. ನಾಗರತ್ನ ಹೇಳಿದರು.
ಈ ಹಿಂದಿನ ಸಿಆರ್‌ಪಿಸಿ ಸೆಕ್ಷನ್ 125 ಎಲ್ಲ ಮಹಿಳೆಯರಿಗೆ ಅನ್ವಯವಾಗಲಿದೆ. ಈ ಅಂಶದೊಂದಿಗೆ ಸಲ್ಲಿಕೆಯಾಗಿರುವ ಕ್ರಿಮಿನಲ್ ಮೇಲ್ಮನವಿಯನ್ನು ವಜಾ ಮಾಡುತ್ತಿರುವುದಾಗಿ ನ್ಯಾಯಪೀಠ ತೀರ್ಪು ನೀಡಿದೆ.