ಕಾಣೆಯಾದ ಸರಕಾರಿ ನೌಕರರ ವಾರಸುದಾರರಿಗೆ ಕುಟುಂಬ ಪಿಂಚಣಿ: ರಾಜ್ಯ ಸರಕಾರದ ನೂತನ ಆದೇಶದ ಮಾಹಿತಿ
ಕಾಣೆಯಾದ ಸರಕಾರಿ ನೌಕರರ ವಾರಸುದಾರರಿಗೆ ಕುಟುಂಬ ಪಿಂಚಣಿ ನೀಡುವ ಬಗ್ಗೆ ರಾಜ್ಯ ಸರಕಾರ ಹೊರಡಿಸಿದ ಆದೇಶಗಳ ಬಗ್ಗೆ ಮಾಹಿತಿ
ಸರಕಾರಿ ನೌಕರ ಸೇವೆಯಲ್ಲಿರುವಾಗ ಅಥವಾ ಸೇವೆಯಿಂದ ನಿವೃತ್ತನಾದ ಬಳಿಕ ನಾಪತ್ತೆಯಾದ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದು. ಈ ರೀತಿ ಏಕಾಏಕಿ ಕಣ್ಮರೆಯಾದ ಸಂದರ್ಭದಲ್ಲಿ ನೌಕರರ ಕುಟುಂಬ ಆರ್ಥಿಕವಾಗಿ ತುಂಬಾ ಕಷ್ಟ ನಷ್ಟಗಳಿಗೆ ಒಳಗಾಗುವ ಸಾಧ್ಯತೆ ಇದೆ.
ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಕಾರ ಓರ್ವ ವ್ಯಕ್ತಿ ಕಣ್ಮರೆಯಾಗಿ ಏಳು ವರ್ಷಗಳ ವರೆಗೆ ಪತ್ತೆಯಾಗದೆ ಇದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಕಣ್ಮರೆಯಾದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಘೋಷಿಸಬೇಕೆಂಬ ಡಿಕ್ರಿ ಕೋರಿ ಕಾಣೆಯಾದ ವ್ಯಕ್ತಿಯ ವಾರಸುದಾರರು ದಾವೆ ಸಲ್ಲಿಸಬೇಕು.
ಸೇವೆಯಲ್ಲಿರುವ ಅಥವಾ ಸೇವೆಯಿಂದ ನಿವೃತ್ತನಾದ ಸರಕಾರಿ ನೌಕರರನು ಕಾಣೆಯಾದ ಪ್ರಕರಣಗಳಲ್ಲಿ ಕೂಡ ಇದೇ ನಿಯಮವನ್ನು ಅನ್ವಯಿಸಿ ಸದರಿ ನೌಕರ ಕಾಣೆಯಾದ ದಿನಾಂಕದಿಂದ ಏಳು ವರ್ಷಗಳ ವರೆಗೆ ಪತ್ತೆಯಾಗದೆ ಇದ್ದಲ್ಲಿ ನ್ಯಾಯಾಲಯದಿಂದ ಆತ ಮೃತನಾಗಿದ್ದಾನೆ ಎಂದು ಭಾವಿಸುವ ಘೋಷಣಾತ್ಮಕ ಡಿಕ್ರಿ ಪಡೆದು ಆತನ ವಾರಸುದಾರರಿಗೆ ದೊರೆಯತಕ್ಕ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಹಾಗೂ ಕುಟುಂಬ ಪಿಂಚಣಿಯನ್ನು ಪಡೆಯಲು ಸರಕಾರವು 25.5.1984 ರಂದು ಕ್ರಮಾಂಕ ಆ.ಇ. (ವಿಶೇಷ) 72 ಪಿಇಟಿ 84 ರ ಸುತ್ತೋಲೆಯಲ್ಲಿ ನೀಡಿರುವ ಮಾರ್ಗಸೂಚಿಯಂತೆ ಮಂಜೂರು ಮಾಡಲಾಗುತ್ತಿತ್ತು.
ಕಾಣೆಯಾದ ಸರಕಾರಿ ನೌಕರರ/ ಪಿಂಚಣಿದಾರರ ಪ್ರಕರಣಗಳಲ್ಲಿ ಏಳು ವರ್ಷಗಳ ವರೆಗೆ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವುದರಿಂದ ಕಾಣೆಯಾದ ಸರಕಾರಿ ನೌಕರರ ಕುಟುಂಬಕ್ಕೆ ತೀವ್ರ ತೊಂದರೆಯಾಗುವುದನ್ನು ಪರಿಗಣಿಸಿದ ಸರಕಾರವು ದಿನಾಂಕ 25.05.1984 ರ ಸುತ್ತೋಲೆಯಲ್ಲಿ ಜಾರಿಯಲ್ಲಿರುವ ಕಾರ್ಯವಿಧಾನವನ್ನು ಸರಳೀಕರಿಸುವ ಪ್ರಶ್ನೆಯನ್ನು ಪರಿಶೀಲಿಸಿ ಸದರಿ ಸುತ್ತೋಲೆಯಲ್ಲಿನ ನಿರ್ದೇಶನಗಳನ್ನು ರದ್ದುಪಡಿಸಿ ದಿನಾಂಕ 21.3.1988 ರಂದು ಸಂಖ್ಯೆ ಆರ್ಥಿಕ (ವಿಶೇಷ) 11 ಕುವಿವೇ/ 87 ಪ್ರಕಾರ ಅಧಿಕೃತ ಜ್ಞಾಪನವನ್ನು ಹೊರಡಿಸಿ ಈ ಕೆಳಕಾಣಿಸಿದಂತೆ ಆದೇಶ ಹೊರಡಿಸಿತು.
ಸರಕಾರಿ ನೌಕರ ತನ್ನ ಕುಟುಂಬವನ್ನು ತ್ಯಜಿಸಿ ಕಣ್ಮರೆಯಾದಾಗ ಆತನಿಗೆ ಬರಬೇಕಾದ ವೇತನದ ಬಾಕಿ, ನಗದೀಕರಿಸಬಹುದಾದ ರಜೆಯ ವೇತನ ಮತ್ತು ಸೇವೆಯಲ್ಲಿದ್ದಾಗ ಮಾಡಿರುವ ನಾಮನಿರ್ದೇಶವನ್ನು ಗಮನದಲ್ಲಿಟ್ಟುಕೊಂಡು ಆತನ ಭವಿಷ್ಯ ನಿಧಿಯ ಖಾತೆಯಲ್ಲಿನ ಮೊಬಲಗನ್ನು ಮೊತ್ತಮೊದಲು ಆತನ ಕುಟುಂಬಕ್ಕೆ ಮಂಜೂರು ಮಾಡಬೇಕು.
ಪಿಂಚಣಿದಾರರ ಪ್ರಕರಣಗಳಲ್ಲಿ ಕಣ್ಮರೆಯಾದ ದಿನಾಂಕದ ವರೆಗೂ ಪಡೆಯದೆ ಇರುವ ಪಿಂಚಣಿ ಹಣದ ಬಾಕಿಯನ್ನು ಮೊದಲಿಗೆ ಆತನ ಕುಟುಂಬಕ್ಕೆ ಮಂಜೂರು ಮಾಡಬೇಕು. ಕರ್ನಾಟಕ ಖಜಾನೆ ಸಂಹಿತೆಯಲ್ಲಿ ಸಂದಾಯ ಮಾಡಲು ಸೂಚಿಸಿರುವ ಕಾರ್ಯವಿಧಾನ ಇದಕ್ಕೂ ಅನ್ವಯಿಸುವುದು.
ಕಣ್ಮರೆಯಾದ ದಿನಾಂಕದಿಂದ ಒಂದು ವರ್ಷದ ಅವಧಿಯ ಬಳಿಕ ಸರಕಾರಿ ನೌಕರನು ಮಾಡಿರುವ ನಾಮ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಕುಟುಂಬವೇತನ, ಉಪದಾನ ,ಸಮೂಹ ವಿಮೆ ಯೋಜನೆಯಲ್ಲಿ ಕೂಡಿಟ್ಟ ಉಳಿತಾಯದ ನಿಧಿಯನ್ನು ಮಂಜೂರು ಮಾಡಬೇಕು. ಪಿಂಚಣಿದಾರರ ಪ್ರಕರಣಗಳಲ್ಲಿ ಕೇವಲ ಕುಟುಂಬ ವೇತನ ಮತ್ತು ಕಣ್ಮರೆಯಾದ ದಿನಾಂಕದಿಂದ ಬಾಕಿ ಇರುವ ಪಿಂಚಣಿ ಮೊಬಲಗನ್ನು ಮಂಜೂರು ಮಾಡಬೇಕು. ಕರ್ನಾಟಕ ಖಜಾನೆ ಸಂಹಿತೆಯಲ್ಲಿ ಜೀವಿತಾವಧಿಯ ಪಿಂಚಣಿ ಬಾಕಿಯನ್ನು ಪಾವತಿ ಮಾಡಲು ವಿಧಿಸಿರುವ ಕಾರ್ಯ ವಿಧಾನದಂತೆ ಬಾಕಿ ಮೊಬಲಗನ್ನು ಪಾವತಿ ಮಾಡಬೇಕು.
ಕಾಣೆಯಾದ ಸರಕಾರಿ ನೌಕರರ ಕುಟುಂಬದ ಸದಸ್ಯರು ಸಂಬಂಧಿಸಿದ ಆರಕ್ಷಕ ಠಾಣೆಯಲ್ಲಿ ದೂರನ್ನು ನೋಂದಾಯಿಸಿರಬೇಕು ಮತ್ತು ಕಾಣೆಯಾದ ಸರಕಾರಿ ನೌಕರನನ್ನು ಅಥವಾ ಪಿಂಚಣಿದಾರರನನ್ನು ಹುಡುಕಲು ಪೊಲೀಸರು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಯಿತೆಂಬ ಕುರಿತು ಪೊಲೀಸರು ನೀಡಿರುವ ವರದಿಯನ್ನು ಪಡೆದಿರಬೇಕು.
ಒಂದು ವೇಳೆ ಕಾಣೆಯಾದ ಸರಕಾರಿ ನೌಕರ ಹಿಂತಿರುಗಿ ಬಂದು ತನಗೆ ಸಲ್ಲಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಕುಟುಂಬದ ಅಥವಾ ನಾಮ ನಿರ್ದೇಶಿತ ವ್ಯಕ್ತಿ ಈ ಆದೇಶದಂತೆ ಪಾವತಿ ಮಾಡಲಾದ ಮೊಬಲಗನ್ನು ಸಂದಾಯ ಮಾಡುವಂತೆ ಮತ್ತು ಸರಕಾರಕ್ಕೆ ಉಂಟಾದ ನಷ್ಟವನ್ನು ಭರ್ತಿ ಮಾಡಿ ಕೊಡುವಂತೆ ಮಂಜೂರಾತಿಯನ್ನು ಮಾಡುವ ಸಕ್ಸಮ ಅಧಿಕಾರಿಗೆ ತೃಪ್ತಿಕರವಾಗುವಂತಹ ಇಬ್ಬರು ಜಾಮೀನುದಾರರೊಂದಿಗೆ ನಷ್ಟ ಭರ್ತಿ ಮುಚ್ಚಳಿಕೆ ಪತ್ರವನ್ನು ಸರಕಾರಿ ಆದೇಶಕ್ಕೆ ಅನುಬಂಧವಾಗಿ ಲಗತ್ತಿಸಿದ ನಮೂನೆಯಲ್ಲಿ ಅನ್ವಯಿಸತಕ್ಕ ಮೌಲ್ಯದ ಮುದ್ರಾಂಕ ಕಾಗದದ ಮೇಲೆ ಬರೆದುಕೊಡತಕ್ಕದ್ದು.
ಒಂದು ವೇಳೆ ಕಾಣೆಯಾದ ಸರಕಾರಿ ನೌಕರರನು ಹಿಂತಿರುಗಿ ಬಂದು ಸರಕಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಕುಟುಂಬ ಅಥವಾ ನಾಮನಿರ್ದೇಶಿತನಿಗೆ ಪಾವತಿ ಮಾಡಿದ ಮೊಬಲಗನ್ನು ಸರಕಾರಿ ನೌಕರನಿಗೆ ಪಾವತಿ ಮಾಡಬೇಕಾದ ಮೊಬಲಗಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕುಟುಂಬದ ಅಥವಾ ನಾಮನಿರ್ದೇಶಿತನಿಂದ ವಚನಪತ್ರವನ್ನು ಪಡೆಯಬೇಕು. ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಲು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಮೂಲಕ ಸಚಿವಾಲಯದ ಆಡಳಿತ ಇಲಾಖೆಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಕಣ್ಮರೆಯಾದ ವ್ಯಕ್ತಿಯ ವಾರಸುದಾರರು ಪಿಂಚಣಿ ಸೌಲಭ್ಯಗಳ ಸಂದಾಯಕ್ಕೆ ಅರ್ಜಿ ಸಲ್ಲಿಸಿದ ಮೂರು ತಿಂಗಳ ಒಳಗೆ ಪ್ರಕರಣವನ್ನು ಇತ್ಯರ್ಥಪಡಿಸಬೇಕು ವಿಳಂಬವಾದ ಪಕ್ಷದಲ್ಲಿ ನಾಲ್ಕನೇ ತಿಂಗಳ ಪ್ರಾರಂಭದಿಂದ ಇತ್ಯರ್ಥಪಡಿಸಿದ ತಿಂಗಳ ಹಿಂದಿನ ತಿಂಗಳ ಅಂತ್ಯದವರೆಗಿನ ಅವಧಿಗೆ ಶೇಕಡ 12ರ ದರದಲ್ಲಿ ಬಡ್ಡಿ ಪಾವತಿಸಬೇಕು. ಈ ರೀತಿ ವಿಳಂಬಕ್ಕಾಗಿ ಪಾವತಿಸುವ ಬಡ್ಡಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಂದ ವಸೂಲು ಮಾಡಬೇಕು. ನೌಕರರನು ಕಣ್ಮರೆಯಾದ ದಿನಾಂಕದ ನಂತರ ಒಂದು ವರ್ಷದ ಅವಧಿಯನ್ನು ಅಸಾಧಾರಣ ರಜೆ ಎಂದು ಪರಿಗಣಿಸಿ ಈ ಅವಧಿಯು ಸೇರಿದಂತೆ ನೌಕರರನ ಒಟ್ಟು ಸೇವಾವಧಿಯಲ್ಲಿ ನಿಯಮ 244 ಎ ರಂತೆ ಮೂರು ವರ್ಷಗಳ ವರೆಗೆ ಅರ್ಹತಾದಾಯಕ ಸೇವೆ ಎಂದು ಪರಿಗಣಿಸಬೇಕು.
ಕಾಣೆಯಾದ ದಿನಾಂಕದಂದು ನೌಕರನಿಗೆ ಪಾವತಿಸಬೇಕಾಗಿದ್ದ ವೇತನದ ಬಾಕಿ, ಗಳಿಕೆ ರಜೆ ನಗದಿಕರಣದ ರಜಾ ವೇತನ ಮತ್ತು ಭವಿಷ್ಯ ನಿಧಿ ಖಾತೆಯಲ್ಲಿರುವ ಹಣ ಇವುಗಳನ್ನು ಉದ್ಯೋಗಿಯ ವಾರಸುದಾರರಿಗೆ ಮೊದಲಿಗೆ ಮಂಜೂರು ಮಾಡಬೇಕು. ಕಣ್ಮರೆಯಾದ ಒಂದು ವರ್ಷದ ಬಳಿಕ ಉದ್ಯೋಗಿ ಮಾಡಿರುವ ನಾಮನಿರ್ದೇಶನಗಳನ್ನು ಗಮನದಲ್ಲಿಟ್ಟು ಕುಟುಂಬ ನಿವೃತ್ತಿ ವೇತನ, ಉಪದಾನ ನಮೂಹ ವಿಮಾ ಯೋಜನೆಯ ಉಳಿತಾಯ ನಿಧಿಯಲ್ಲಿ ಲಭ್ಯವಿರುವ ಹಣವನ್ನು ಬಡ್ಡಿಯೊಡನೆ ಪಾವತಿಗೆ ಮಂಜೂರು ನೀಡಬೇಕು.
ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 108 ರನ್ವಯ ಕಾಣೆಯಾದ ನೌಕರರ ನಾಗರಿಕ ಮರಣ (ಸಿವಿಲ್ ಡೆತ್) ಸಂಬಂಧದಲ್ಲಿ ಕಾಣೆಯಾದ ಸರಕಾರಿ ನೌಕರರ ವಾರಸುದಾರರು ನ್ಯಾಯಾಲಯದಿಂದ ಡಿಕ್ರಿ ಪಡೆದಿರುವ ಪ್ರಕರಣಗಳಲ್ಲಿ ಅಂತಹ ಪ್ರಕರಣಗಳನ್ನು ನಿಯತಗೊಳಿಸುವುದು ಒಳಗೊಂಡಂತೆ ಈ ಕೆಳಕಂಡ ಅಂಶಗಳು ಪರಿಶೀಲನಾರ್ಹವಾಗಿದೆ ಎಂಬ ನಿಷ್ಕರ್ಷೆಗೆ ಬಂದ ಸರಕಾರವು ಅಧಿಕೃತ ಜ್ಞಾಪನ ಸಂಖ್ಯೆ ಆ. ಇ. 295 ಪಿಇಎನ್ 1: 2010 ದಿನಾಂಕ 17.07.2014 ರ ಪ್ರಕಾರ ಆದೇಶ ಹೊರಡಿಸಿತು.
1. ಕಾಣೆಯಾದ ಸರಕಾರಿ ನೌಕರರ ಕುಟುಂಬಕ್ಕೆ ಕುಟುಂಬ ಪಿಂಚಣಿ ಸೌಲಭ್ಯವನ್ನು ಕಾಣೆಯಾದ ದಿನಾಂಕದಿಂದ ಅಥವಾ ನ್ಯಾಯಾಲಯದ ಡಿಕ್ರಿ/ ಆದೇಶದನ್ವಯ ಭಾವಿಸುವ ಮರಣದ ದಿನಾಂಕದಿಂದ ನೀಡಬಹುದೇ? ಈ ಎರಡು ದಿನಾಂಕಗಳು ಬೇರೆ ಬೇರೆಯಾದ ಪ್ರಕರಣಗಳಲ್ಲಿ ಈ ವ್ಯತ್ಯಾಸದ ಅವಧಿಯನ್ನು ನಿಯತಗೊಳಿಸುವುದು.
2. ದಿನಾಂಕ 21.3.1988ರ ಅಧಿಕೃತ ಜ್ಞಾಪನದಲ್ಲಿನ ಉಪಬಂಧಗಳನ್ವಯ ಸರಕಾರಿ ನೌಕರರನು ಕಾಣೆಯಾದ ದಿನಾಂಕದಿಂದ ಒಂದು ವರ್ಷದ ನಂತರ ಕುಟುಂಬ ಪಿಂಚಣಿಯನ್ನು ಬಿಡುಗಡೆಗೊಳಿಸಬೇಕೆಂದಿರುತ್ತದೆ. ಮತ್ತು ಈ ಒಂದು ವರ್ಷವನ್ನು ಅಸಾಧಾರಣ ರಜೆಯನ್ನಾಗಿ ಪರಿಗಣಿಸಬೇಕೆಂದು ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 244 ಎ ರನ್ವಯ ಈ ಅವಧಿಯನ್ನು ಅರ್ಹತಾ ದಾಯಕ ಸೇವೆಯನ್ನಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಪ್ರಶ್ನಿತ ಪ್ರಕರಣಗಳಲ್ಲಿ ಅಂದರೆ ದಿನಾಂಕ 21.3.1988 ರ ಅಧಿಕೃತ ಜ್ಞಾಪನದನ್ವಯ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಪ್ರಕರಣಗಳೆಂದು ಪರಿಗಣಿಸುವಲ್ಲಿ ಈ ಅವಧಿಯ ಪರಿಗಣನೆಯ ಕುರಿತು ರಾಜ್ಯ ಸರಕಾರವು ಮೇಲ್ಕಂಡ ಅಂಶಗಳನ್ನು ಒಳಗೊಂಡಂತೆ ವಿಷಯವನ್ನು ಪರಿಶೀಲಿಸಿ, ಈ ಕೆಳಕಂಡಂತೆ ಸ್ಪಷ್ಟೀಕರಿಸಿದೆ.
ದಿನಾಂಕ 21.03.1988ರ ಅಧಿಕೃತ ಜ್ಞಾಪನದ ಉಪಬಂಧಗಳಲ್ಲಿ ಕಾಣೆಯಾದ ಸರಕಾರಿ ನೌಕರರ ಕುಟುಂಬದವರಿಗೆ ಕುಟುಂಬ ಪಿಂಚಣಿಯನ್ನು ಆತನು ಕಾಣೆಯಾದ ದಿನಾಂಕದಿಂದ ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಪ್ರಾರಂಭಿಕವಾಗಿ ಅಂತಹ ಎಲ್ಲಾ ಪ್ರಕರಣಗಳಲ್ಲಿ ಎಲ್ಲಿ ಸರಕಾರಿ ನೌಕರರು ಸೇವೆಯಲ್ಲಿರುವಾಗಲೇ ಕಾಣೆಯಾಗಿರುತ್ತಾನೋ, ಅಂತಹ ಕುಟುಂಬದವರಿಗೆ ದಿನಾಂಕ 21-3-1988ರ ಅಧಿಕೃತ ಜ್ಞಾಪನದ ಅನ್ವಯ ಸರಕಾರಿ ನೌಕರನು ಕಾಣೆಯಾದ ದಿನಾಂಕದಿಂದ ಒಂದು ವರ್ಷದ ನಂತರ ಕುಟುಂಬ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಬೇಕಾಗುತ್ತದೆ ಮತ್ತು ಈ ಅವಧಿಯನ್ನು ಅಸಾಧಾರಣ ರಜೆಯನ್ನಾಗಿ ಪರಿಗಣಿಸಬೇಕಾಗುತ್ತದೆ.
ಕಾಣೆಯಾದ ನೌಕರನ ಕುಟುಂಬವು ನ್ಯಾಯಾಲಯದ ಡಿಕ್ರಿಯನ್ನು ಭಾರತೀಯ ಸಾಕ್ಷ ಅಧಿನಿಯಮದ ಸೆಕ್ಷನ್ 108 ರನ್ವಯ ಪಡೆದಿರುವ ಮತ್ತು ಡಿಕ್ರಿಯ ದಿನಾಂಕಕ್ಕೆ ಸಂಬಂಧಿತ ಕಾಣೆಯಾದ ನೌಕರನು ವಯೋ ನಿವೃತ್ತಿ ವಯಸ್ಸನ್ನು ತಲುಪದಿರುವಂತಹ ಪ್ರಕರಣಗಳಲ್ಲಿ ಆತನು ಸೇವೆಯಲ್ಲಿರುವಾಗಲೇ ನಿಧನ ಹೊಂದಿರುವುದಾಗಿ ಭಾವಿಸತಕ್ಕದ್ದು. ಆದ್ದರಿಂದ ನ್ಯಾಯಾಲಯದ ಡಿಕ್ರಿಯ ದಿನಾಂಕಕ್ಕೆ ಕಾಣೆಯಾದ ಸರಕಾರಿ ನೌಕರನು ವಯೋ ನಿವೃತ್ತಿ ದಿನಾಂಕವನ್ನು ತಲುಪದಿರುವ ಪ್ರಕರಣಗಳಲ್ಲಿ ಮಾತ್ರವೇ ಸೇವೆಯಲ್ಲಿರುವಾಗಲೇ ನಿಧನ ಹೊಂದಿರುವ ಪ್ರಕರಣವೆಂದು ಪರಿಗಣಿಸಿ ನಿವೃತ್ತಿ ವೇತನ ಸೌಲಭ್ಯಗಳನ್ನು ಪರಿಷ್ಕರಿಸತಕ್ಕದ್ದು. ಮೇಲಿನ ಸಂದರ್ಭದಲ್ಲಿ ಡಿಕ್ರಿಯ ಆಧಾರದ ಮೇರೆಗೆ ಕುಟುಂಬಕ್ಕೆ ಸೌಲಭ್ಯಗಳನ್ನು ಪರಿಗಣಿಸುವಾಗ ನ್ಯಾಯಾಲಯದ ಡಿಕ್ರಿಯ ದಿನಾಂಕದಿಂದ ಕುಟುಂಬ ಪಿಂಚಣಿ ಸೌಲಭ್ಯವು ಪರಿಗಣಿತವಾಗತಕ್ಕದ್ದು. ಈ ಹಿನ್ನೆಲೆಯಿಂದಾಗಿ ದಿನಾಂಕ 21.3.1988ರ ಅಧಿಕೃತ ಜ್ಞಾಪನದನುಸಾರ ಈ ಮುನ್ನ ವಿಸ್ತರಿಸಲಾಗಿದ್ದ ಸೌಲಭ್ಯಗಳನ್ನು ಪುನಃ ಪರಿಷ್ಕರಿಸಿ ಸರಿದೂಗಿಸತಕ್ಕದ್ದು.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 117 (2)ರಲ್ಲಿನ ಅವಕಾಶದ ರೀತ್ಯ ಗರಿಷ್ಠ ರಜೆ ಮಂಜೂರಾತಿ ಅವಧಿಯು 5 ವರ್ಷಗಳನ್ನು ಮೀರತಕ್ಕದ್ದಲ್ಲ. ನೌಕರರನು ಸೇವೆಯಿಂದ ಕಾಣೆಯಾಗಿರುವುದು ಮತ್ತು ನ್ಯಾಯಾಲಯದ ಡಿಕ್ರಿಯ ದಿನಾಂಕ ಈ ಪ್ರಕರಣಗಳಲ್ಲಿ ಏಳು ವರ್ಷಗಳು ಮತ್ತು ಅದಕ್ಕೂ ಮೀರಿ ಗತಿಸುವುದರಿಂದಾಗಿ ಈ ಅವಧಿಯು ಅಸಾಧಾರಣ ರಜೆ ಎಂದು ಪರಿಗಣಿತವಾಗತಕ್ಕದ್ದಲ್ಲ. ಆದ್ದರಿಂದ ಏಳು ವರ್ಷಗಳು ಮತ್ತು ಅದಕ್ಕೂ ಮೀರಿದ ಅವಧಿಯನ್ನು ಕರ್ತವ್ಯದಲ್ಲಿ ಇಲ್ಲದ ಅವಧಿ (ಡೈಸ್ ನಾನ್) ಎಂದೇ ನಿಯತಗೊಳಿಸತಕ್ಕದ್ದು.
ಸರಕಾರಿ ನೌಕರರು ಕಣ್ಮರೆಯಾದ ದಿನಾಂಕದ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ಉಪಲಬ್ಧಗಳನ್ನು ಪರಿಗಣಿಸಿ ಕುಟುಂಬ ವೇತನವು ಪರಿಣಾಮಕಾರಿಯಾಗಿ ಆರಂಭವಾಗುವ ದಿನಾಂಕವನ್ನು ಜಾರಿಯಲ್ಲಿರುವ ಸೂತ್ರದಂತೆ ಕುಟುಂಬವೇತನ, ಉಪಲಬ್ಧಗಳನ್ನು ಲೆಕ್ಕ ಹಾಕಬೇಕು. ಕಾಣೆಯಾದ ದಿನಾಂಕದಲ್ಲಿ ಆತ ಅಸಾಧಾರಣ ರಜೆ ಮೇಲೆ ಅಥವಾ ನಿಲಂಬನೆಯಲ್ಲಿದ್ದು ಕರ್ತವ್ಯದಿಂದ ಗೈರು ಹಾಜರಾಗಿದ್ದರೆ ಅಂತಹ ರಜೆ ಮೇಲೆ ಹೋಗುವುದಕ್ಕೆ ಅಥವಾ ನಿಲಂಬನಕ್ಕೆ ನಿಕಟಪೂರ್ವದಲ್ಲಿ ಆತನು ಪಡೆಯುತ್ತಿದ್ದ ಉಪಲಬ್ಧಗಳನ್ನು ಪರಿಗಣಿಸಿ ಕುಟುಂಬ ವೇತನ ಮತ್ತು ಉಪದಾನವನ್ನು ಲೆಕ್ಕ ಹಾಕಬೇಕು.
ಸರಕಾರಿ ನೌಕರರನು ಪತ್ರಾಂಕಿತ ಅಧಿಕಾರಿಯಾಗಿದ್ದಲ್ಲಿ ಇಲಾಖಾ ಮುಖ್ಯಸ್ಥರು ಮತ್ತು ಪತ್ರಾಂಕಿತೇತ ಅಧಿಕಾರಿಯಾಗಿದ್ದಲ್ಲಿ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಸರಕಾರಕ್ಕೆ ಅವನಿಂದ ಬರಬೇಕಾದ ಬಾಕಿಯನ್ನು ನಿರ್ಧರಿಸಿ ಈಗಾಗಲೇ ನೀಡಿರುವ ಆದೇಶಗಳಂತೆ ಅದನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು.
ಉಪದಾನದ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಆರು ತಿಂಗಳೊಳಗೆ ಉಪದಾನದ ಹಣ ಪಾವತಿಯಾಗದಿದ್ದರೆ ಏಳನೇ ತಿಂಗಳಿನಿಂದ ಪಾವತಿಯಾದ ತಿಂಗಳಿನ ಹಿಂದಿನ ತಿಂಗಳ ಕೊನೆಯವರೆಗೂ ದಿನಾಂಕ 14.8.1985 ರ ಆದೇಶದಲ್ಲಿ ನಿಗದಿಪಡಿಸಿರುವ ದರಗಳಲ್ಲಿ ಬಡ್ಡಿಯನ್ನು ಕೊಡಬೇಕು.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕಾಣೆಯಾದ ಸರಕಾರಿ ನೌಕರರ ವಾರಸುದಾರರಿಗೆ ದೊರೆಯತಕ್ಕ ಕುಟುಂಬ ಪಿಂಚಣಿ ಮತ್ತಿತರ ನಿವೃತ್ತಿಯ ಸೌಲಭ್ಯಗಳನ್ನು ರಾಜ್ಯ ಸರಕಾರವು ದಿನಾಂಕ 17.7.2014 ರಂದು ಹೊರಡಿಸಿದ ಅಧಿಕೃತ ಜ್ಞಾಪನ ಆ.ಇ. 295 ಪಿಇಎನ್ 1/2010 ರ ಪ್ರಕಾರ ಇತ್ಯರ್ಥ ಪಡಿಸಲಾಗುತ್ತದೆ.
✍️ ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು