ಮುಸ್ಲಿಂ ಜೋಡಿ ವಿವಾಹ ಆಮಂತ್ರಣ ಪತ್ರಿಕೆ: ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರು- ವೈರಲ್ ಆದ Invitaion Card
ಮುಸ್ಲಿಂ ಜೋಡಿ ವಿವಾಹ ಆಮಂತ್ರಣ ಪತ್ರಿಕೆ: ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರು- ವೈರಲ್ ಆದ Invitaion Card
ಮಂಗಳೂರು: ಮುಸ್ಲಿಂ ಜೋಡಿಯೊಂದರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ನಮೂದಾಗಿದೆ. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ವಿವಾಹಕ್ಕೆ ಆಮಂತ್ರಣ ಕೋರಿರುವ ಆಮಂತ್ರಣ ಪತ್ರಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಫರಂಗಿಪೇಟೆಯ ಅಬ್ಬಾಸ್ ಎಂಬವರ ಮೊಮ್ಮಗಳು ಫಾತಿಮಾ ಕೌಸರ್ ವಿವಾಹವು ಪಾಣೆಮಂಗಳೂರಿನ ಅಬ್ದುಲ್ ರಾಝಿಕ್ ಎಂಬ ಯುವಕನೊಂದಿಗೆ ನಡೆಯಲಿದೆ. ಈ ವಿವಾಹ ಜುಲೈ 18ರಂದು ನೇರಳಕಟ್ಟೆ ಮಾಣಿ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ.
ಈ ಜೋಡಿಯ ವಿವಾಹ ಆಮಂತ್ರಣ ಪತ್ರಿಕೆ ಪ್ರಿಂಟ್ ಆಗಿದೆ. ಈ ಆಮಂತ್ರಣ ಪತ್ರಿಕೆಯ ಸವಿನಯ ಆಮಂತ್ರಣದ ಜಾಗದಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲರ ಹೆಸರಿದೆ. ಇದೀಗ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ. ಕೆಲವರು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲೂ ಹಾಕಿಕೊಂಡಿದ್ದಾರೆ.
ಫರಂಗಿಪೇಟೆ ಅಬ್ಬಾಸ್ ಕುಟುಂಬಸ್ಥರು ಬಿಜೆಪಿ ಕಾರ್ಯಕರ್ತರು. ಅವರ ಮನೆಯಲ್ಲಿ ಈ ಹಿಂದೆ ಮದುವೆ ನಡೆದಾಗ ಅಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷರಾಗಿದ್ದ ಮೋನಪ್ಪ ಭಂಡಾರಿಯವರ ಹೆಸರಿನಲ್ಲಿ ಸವಿನಯ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಹಂಚಲಾಗಿತ್ತು.
ಇದೀಗ ಅವರ ಮನೆಯಲ್ಲಿ ನಡೆಯುತ್ತಿರುವ ಮದುವೆಗೆ ಇಂದಿನ ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರಿನಲ್ಲಿ ಸವಿನಯ ಆಮಂತ್ರಣ ಕೋರಲಾಗಿದೆ. ಬಿಜೆಪಿ ಕಾರ್ಯಕರ್ತರ ಈ ಅಭಿಮಾನ ತಮಗೆ ಸಂತಸ ತಂದಿದೆ ಎಂದು ಸತೀಶ್ ಕುಂಪಲ ಅವರು ತಿಳಿಸಿದ್ದಾರೆ.