NDPS Act: ವಶಪಡಿಸಿ ವಸ್ತುಗಳ ಪ್ರಯೋಗಾಲಯ ಪರೀಕ್ಷೆ ಮುನ್ನ ತಖ್ತೆ ಸಿದ್ಧಪಡಿಸಿ ಮ್ಯಾಜಿಸ್ಟ್ರೇಟ್ ಪ್ರಮಾಣಿಕರಿಸುವುದು ಕಡ್ಡಾಯ: ಕರ್ನಾಟಕ ಹೈಕೋರ್ಟ್
NDPS Act: ವಶಪಡಿಸಿ ವಸ್ತುಗಳ ಪ್ರಯೋಗಾಲಯ ಪರೀಕ್ಷೆ ಮುನ್ನ ತಖ್ತೆ ಸಿದ್ಧಪಡಿಸಿ ಮ್ಯಾಜಿಸ್ಟ್ರೇಟ್ ಪ್ರಮಾಣಿಕರಿಸುವುದು ಕಡ್ಡಾಯ: ಕರ್ನಾಟಕ ಹೈಕೋರ್ಟ್
ನಿಷೇಧಿತ ವಸ್ತುಗಳನ್ನು ರಾಸಾಯನಿಕ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು ಅಧಿಕಾರಿಗಳು ತಾವು ವಶಪಡಿಸಿಕೊಂಡ ನಿಷೇಧಿತ ದಾಸ್ತಾನುಗಳ ತಖ್ತೆಯನ್ನು ಸಿದ್ಧಪಡಿಸಬೇಕು ಮತ್ತು ಅದನ್ನು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಬೀದರ್‌ನ ಹುಮ್ನಾಬಾದ್ ಪೊಲೀಸ್ ಠಾಣೆಯ ಪೊಲೀಸರು ಹುಮ್ನಾಬಾದ್ ಬಸ್ ನಿಲ್ದಾಣದಲ್ಲಿ ಮುಂಬೈ ನಿವಾಸಿ ಶಾರೂಖ್ ಮತ್ತು ಉತ್ತರ ಪ್ರದೇಶದ ಶುಭಂ ಅವರಿಂದ ಒಟ್ಟು 30 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಅವರ ವಿರುದ್ಧ ಗಾಂಜಾ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೀದರ್‌ನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಿನಾಂಕ 29-09-2022ರಂದು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಬಾಧಿತ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೇಲ್ಮನವಿದಾರರ ಪರ ವಕೀಲರು, ಪ್ರಕರಣದ ವಿಚಾರಣೆಯ ವೇಳೆ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯನ್ನು ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ವಿಚಾರಣೆ ನಡೆಸಿರಲಿಲ್ಲ. ಅದೇ ರೀತಿ, NDPS ಕಾಯ್ದೆಯ ಸೆಕ್ಷನ್ 52 A ಪ್ರಕಾರ, ಪ್ರಯೋಗಾಲಯಕ್ಕೆ ಕಳುಹಿಸುವ ಮುನ್ನ ಅಗತ್ಯ ಕಾನೂನು ಕ್ರಮವನ್ನು ಕೈಗೊಂಡಿಲ್ಲ ಎಂಬುದನ್ನು ನ್ಯಾಯಪೀಠದ ಮುಂದೆ ನಿವೇದಿಸಿಕೊಂಡರು.
NDPS ಕಾಯ್ದೆಯ ಸೆಕ್ಷನ್ 52 A ಪ್ರಕಾರ, ತನಿಖಾಧಿಕಾರಿಯು ವಶಪಡಿಸಿಕೊಂಡ ನಿಷೇಧಿತ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು, ಆ ದಾಸ್ತಾನುಗಳ ತಖ್ತೆಯನ್ನು ತಯಾರಿಸಿ ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸುವುದು ಕಡ್ಡಾಯವಾಗಿದೆ.
ಆದರೆ, ಈ ಪ್ರಕರಣದಲ್ಲಿ ಗಜೆಟೆಡ್ ಅಧಿಕಾರಿಯ ಮುಂದೆ ಈ ವಸ್ತುಗಳನ್ನು ಪ್ರಮಾಣೀಕರಿಸಲಾಗಿತ್ತು. ಹಾಗಾಗಿ, ಈ ನಿಶಾನೆಗಳನ್ನು ಪ್ರಾಥಮಿಕ ಸಾಕ್ಷ್ಯವನ್ನಾಗಿ ಪರಿಗಣಿಸಲು ಬರುವುದಿಲ್ಲ. ಆದುದರಿಂದ ಸಾಕ್ಷ್ಯದ ಕೊರತೆಯಿಂದ ನ್ಯಾಯಿಕ ವಿಚಾರಣೆಯಲ್ಲೂ ವ್ಯತ್ಯಾಸ ಉಂಟಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮತ್ತು ಮೇಲ್ಮನವಿದಾರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಆರೋಪಿಗಳನ್ನು ಖುಲಾಸೆಗೊಳಿಸಿತು.
ಪ್ರಕರಣ: ಶಾರುಖ್ S/o ಅಯೂಬ್ ಖಾನ್ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, Crl A 200230/2023 & Crl A 200147/2023, Dated 5-07-2024
it is mandatory for authorities to prepare an inventory of seized contraband material and get it certified before the jurisdicational magistrate before sending it to the Forensic Science Laboratory for the chemical examination.: Karnataka High Court