ಪೊಲೀಸರ ಕರ್ತವ್ಯವನ್ನು ಫೇಸ್‌ಬುಕ್ ಲೈವ್ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಲ್ಲ: ಹೈಕೋರ್ಟ್
ಪೊಲೀಸರ ಕರ್ತವ್ಯವನ್ನು ಫೇಸ್‌ಬುಕ್ ಲೈವ್ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಲ್ಲ: ಹೈಕೋರ್ಟ್
ಸಂಚಾರಿ ಪೊಲೀಸರು ಸೇರಿದಂತೆ ಕರ್ತವ್ಯ ನಿರತ ಪೊಲೀಸರ ಕ್ರಮವನ್ನು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ (ಲೈವ್) ಮಾಡಿದರೆ ಅದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎನ್ನಲಾಗದು ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್ ತೀರ್ಪು ನೀಡಿದೆ.
ಹಿಮಾಚಲ ಪ್ರದೇಶ ಹೈಕೋರ್ಟ್‌ನ ನ್ಯಾ. ಸಂದೀಪ್ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ವಾಹನ ತಪಾಸಣೆ ಮಾಡುತ್ತಿದ್ದ ಸಂಚಾರಿ ವಿಭಾಗದ ಪೊಲೀಸರು ಕರ್ತವ್ಯ ನಿರತರಾಗಿದ್ದಾಗ ದಾಖಲೆ ತೋರಿಸಲು ಹೇಳಿಸಿಕೊಂಡ ವ್ಯಕ್ತಿಯೊಬ್ಬರು ಫೇಸ್ ಬುಕ್ ಲೈವ್ ಮಾಡಿದ್ದರು. ಲೈವ್ ಸಂದರ್ಭದಲ್ಲಿ ಕೆಲ ಟೀಕೆಗಳನ್ನು ಮಾಡಿದ್ದ ಚಾಲಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 186ರ ಅಡಿಯಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿ ಮಾಡಿದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿತ್ತು. ಶಿಮ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವ್ಯಕ್ತಿಯ ನಡೆ ಸಾತ್ವಿಕವಾಗಿದ್ದರೆ ಅದು ಕರ್ತವ್ಯಕ್ಕೆ ಅಡ್ಡಿ ಎನ್ನಲಾಗದು. ಬದಲಿಗೆ ಬಲ ಪ್ರದರ್ಶನ, ಬೆದರಿಕೆ ಇಲ್ಲವೇ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಕ್ರಿಯೆ ನಡೆದಿದ್ದಾಗ ಮಾತ್ರ ಐಪಿಸಿ ಸೆಕ್ಷನ್ 186 ಆಕರ್ಷಣೆಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ವಿರುದ್ಧ ನಿಖರ ಆರೋಪ ಏನೆಂದರೆ, ಅವರು ಫೇಸ್ ಬುಕ್‌ನಲ್ಲಿ ನೇರ ಪ್ರಸಾರ ಮಾಡಿ ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು. ಆದರೆ, ಅಂತಹ ಕೃತ್ಯ ನಡೆದಿದ್ದರೆ ಅದು ಅರ್ಜಿದಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅವರ ಲೈವ್ ದೃಶ್ಯಾವಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಹೇಳಿಕೆಗಳು ಎಲ್ಲಿಯೂ ಕಂಡುಬರುವುದಿಲ್ಲ ಎಂದು ಹೇಳಿರುವ ಅವರು, ಅರ್ಜಿದಾರರು ತಾನು ಅನಗತ್ಯವಾಗಿ ಕಿರುಕುಳ ಅನುಭವಿಸಿದ್ದೇನೆ ಎಂಬುದನ್ನು ಪ್ರದರ್ಶಿಸಲು ನೇರ ಪ್ರಸಾರದ ಮೊರೆ ಹೋಗಿದ್ದಾರೆ ಎಂದು ಹೇಳಿ ಚಾಲಕರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.
ಪ್ರಕರಣ: ಸೀತಾರಾಮ ಶರ್ಮಾ Vs ಹಿಮಾಚಲ ಪ್ರದೇಶ ಮತ್ತಿತರರು
ಹಿಮಾಚಲ ಪ್ರದೇಶ ಹೈಕೋರ್ಟ್