ಪಕ್ಷಕಾರರ ಪರ ಕಾಲಾವಕಾಶ ಕೋರಿದ ವಕೀಲರ ಕಸ್ಟಡಿಗೆ ಆದೇಶ: ಸಿವಿಲ್ ನ್ಯಾಯಾಧೀಶರ ಕ್ರಮಕ್ಕೆ ವಕೀಲರ ಒಕ್ಕೂಟ ಖಂಡನೆ
ಪಕ್ಷಕಾರರ ಪರ ಕಾಲಾವಕಾಶ ಕೋರಿದ ವಕೀಲರ ಕಸ್ಟಡಿಗೆ ಆದೇಶ: ಸಿವಿಲ್ ನ್ಯಾಯಾಧೀಶರ ಕ್ರಮಕ್ಕೆ ವಕೀಲರ ಒಕ್ಕೂಟ ಖಂಡನೆ
ಪಕ್ಷಕಾರರ ಪರವಾಗಿ ತೆರೆದ ನ್ಯಾಯಾಲಯದಲ್ಲಿ ಪ್ರಕರಣದ ಮುಂದಿನ ವಿಚಾರಣೆಗೆ ಕಾಲಾವಕಾಶ ಕೋರಿದ ವಕೀಲರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸಿವಿಲ್ ನ್ಯಾಯಾಧೀಶರು ಬಾದಾಮಿ ಪೊಲೀಸರಿಗೆ ಆದೇಶ ಹೊರಡಿಸಿದ್ದು, ಸಿವಿಲ್ ನ್ಯಾಯಾಧೀಶರ ಈ ಕ್ರಮವನ್ನು ಅಖಿಲ ಭಾರತ ವಕೀಲರ ಒಕ್ಕೂಟ ಬಲವಾಗಿ ಖಂಡಿಸಿದೆ.
ಅಖಿಲ ಭಾರತ ವಕೀಲರ ಒಕ್ಕೂಟ (AILU) ಧಾರವಾಡ ಜಿಲ್ಲಾ ಘಟಕ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬಾದಾಮಿಯ ವಕೀಲರ ವಿರುದ್ದದ ನ್ಯಾಯಾದೀಶರ ಕ್ರಮ ಕಾನೂನು ಬಾಹಿರ ಎಂದು ಬಣ್ಣಿಸಿದೆ.
ದಿನಾಂಕ 20-07-2024ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ವಕೀಲರ ಸಂಘದ ಸದಸ್ಯ ವಕೀಲರಾದ ಪಿ. ಬಿ. ಮಲ್ಲಾಪುರ ತಮ್ಮ ಪಕ್ಷಗಾರರ ಪರವಾಗಿ ತೆರೆದ ನ್ಯಾಯಾಲಯದಲ್ಲಿ ಪ್ರಕರಣದ ಮುಂದಿನ ವಿಚಾರಣೆಗೆ ಸಮಯವಕಾಶ ಕೋರಿದರು.
ಈ ಕಾರಣದಿಂದ ಅಸಮಾಧಾನಗೊಂಡ ಸಿವಿಲ್ ನ್ಯಾಯಾಧೀಶರು, ವಕೀಲರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಬಾದಾಮಿ ಪೊಲೀಸರಿಗೆ ತೆರೆದ ನ್ಯಾಯಾಲಯದಲ್ಲಿ ಆದೇಶ ನೀಡಿದ್ದರು.
ದ ಅಲ್ಲಿನ ಪ್ರಧಾನ ದಿವಾಣಿ ನ್ಯಾಯಾದಿಶರ ಕ್ರಮವನ್ನು *ಅಖಿಲ ಭಾರತ ವಕೀಲರ ಒಕ್ಕೂಟ (AILU)ಕರ್ನಾಟಕ ರಾಜ್ಯ ಸಮಿತಿ* ಬಲವಾಗಿ ಖಂಡಿಸುತ್ತದೆ.
ನ್ಯಾಯವಾದಿಗಳ ಕುರಿತು ಪದೇ ಪದೇ ಅವಮಾನವಾಗುವ ರೀತಿಯಲ್ಲಿ ಸದ್ರಿ ಸಿವಿಲ್ ನ್ಯಾಯಾಧೀಶರು ನಡೆದುಕೊಳ್ಳುತ್ತಿದ್ದು, ಇದು ನ್ಯಾಯಿಕ ಸಮುದಾಯಕ್ಕೆ ತಕ್ಕುದಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಘಟನೆಯ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘಟನೆ ಆಗ್ರಹಿಸಿದೆ.
ತಾವು ಮಾಡದ ತಪ್ಪಿಗಾಗಿ ವಕೀಲರ 'ವೃತ್ತಿ ಘನತೆ'ಗೆ ದಕ್ಕೆ ಬಂದಾಗ ರಾಜ್ಯದ ಎಲ್ಲಾ ವಕೀಲ ಬಾಂಧವರು ಒಟ್ಟಾಗಿ ಹೋರಾಡಬೇಕು. ಮತ್ತೆ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂದೇಶವನ್ನು ನೀಡುವಂತಾಗಬೇಕು ಎಂದು ಎಐಎಲ್‌ಯು ರಾಜ್ಯ ಜಂಟಿ ಕಾರ್ಯದರ್ಶಿಯಾದ ಬಸವರಾಜ ವಿ ಕೊರಿಮಠ ಅವರು ಹೇಳಿದ್ದಾರೆ.