ಮತ್ತೊಬ್ಬಾಕೆ ಜೊತೆಗೆ ವಿವಾಹಿತ ಪೊಲೀಸ್ ಅಧಿಕಾರಿಯ ಲಿವ್-ಇನ್: ಸೇವೆಯಿಂದ ವಜಾ ಎತ್ತಿಹಿಡಿದ ಹೈಕೋರ್ಟ್
ಮತ್ತೊಬ್ಬಾಕೆ ಜೊತೆಗೆ ವಿವಾಹಿತ ಪೊಲೀಸ್ ಅಧಿಕಾರಿಯ ಲಿವ್-ಇನ್: ಸೇವೆಯಿಂದ ವಜಾ ಎತ್ತಿಹಿಡಿದ ಹೈಕೋರ್ಟ್
ಮದುವೆಯಾಗಿದ್ದರೂ ಮತ್ತೊಬ್ಬಾಕೆ ಜೊತೆಗೆ ವಿವಾಹಿತ ಪೊಲೀಸ್ ಅಧಿಕಾರಿಯ ಲಿವ್-ಇನ್ ಸಂಬಂಧ ಹೊಂದಿದ್ದ ಕಾರಣಕ್ಕೆ ಅವರನ್ನು ಸೇವೆಯಿಂದ ವಜಾಗೊಳಿಸಿದ ಇಲಾಖೆಯ ಆದೇಶವನ್ನು ಜಾರ್ಖಂಡ್ ಹೈಕೋರ್ಟ್ ಎತ್ತಿಹಿಡಿದಿದೆ.
ವಜಾಗೊಂಡಿದ್ದ ಪೊಲೀಸ್ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್‌ನ ನ್ಯಾ. ಎಸ್.ಎನ್. ಪಾಠಕ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಲಿವ್ ಇನ್ ಸಂಬಂಧದಲ್ಲಿ ಇದ್ದ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ಆರೋಪ ಮುಕ್ತಗೊಳಿಸಲಾಗಿದೆ. ಹೀಗಾಗಿ ತನ್ನನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಮತ್ತು ಸೇವೆಗೆ ಮತ್ತೆ ಸೇರ್ಪಡೆಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ಪತ್ನಿ ಇದ್ದರೂ ಬೇರೊಬ್ಬ ಮಹಿಳೆ ಜೊತೆಗೆ ಲಿವ್ ಇನ್ ಸಂಬಂಧದಲ್ಲಿ ಇದ್ದರು. ತಾನು ಸಹಜೀವನ ಸಂಬಂಧದಲ್ಲಿ ಇದ್ದೇನೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಪತ್ನಿ ಇದ್ದರೂ ಇನ್ನೊಬ್ಬಾಕೆ ಜೊತೆಗೆ ಸಹಜೀವನ ನಡೆಸುವುದು ಯೋಗ್ಯ ನಡವಳಿಕೆ ಅಲ್ಲ. ಅಲ್ಲದೆ, ಇದು ರಾಜ್ಯ ಪೊಲೀಸ್ ಸೇವಾ ಷರತ್ತುಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ಆರೋಪಿತ ಅಧಿಕಾರಿಯನ್ನು ವಜಾಗೊಳಿಸಿರುವ ಕ್ರಮ ಸರಿಯಾಗಿದೆ ಮತ್ತು ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ಪತ್ನಿ ಇದ್ದರೂ ಬೇರೊಬ್ಬ ಮಹಿಳೆ ಜೊತೆಗೆ ಲಿವ್ ಇನ್ ಸಂಬಂಧದಲ್ಲಿ ಇದ್ದರು.
ಈ ಸಂಬಂಧದಲ್ಲಿ ಆಕೆ ಗರ್ಭಿಣಿಯಾದರು. ನಂತರ ಇಬ್ಬರ ನಡುವೆ ಜಗಳವಾಗಿ ಪಂಚಾಯ್ತಿ ನಡೆದು ಅಂತಿಮವಾಗಿ 2017ರಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದರು. ಸಹಜೀವನ ಸಂಬಂಧದಲ್ಲಿ ಇದ್ದ ಮಹಿಳೆ ತನ್ನ ಪ್ರಿಯಕರ ಪೊಲೀಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಈ ದೂರನ್ನು ದಾಖಲಿಸಿದ ಇಲಾಖೆ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಿತು. ವಿಚಾರಣೆ ನಡೆದ ಬಳಿಕ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
ಆ ಬಳಿಕ, ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಂಡ ಪೊಲೀಸ್ ಅಧಿಕಾರಿ ತಮ್ಮನ್ನು ವಜಾಗೊಳಿಸಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಮತ್ತೆ ಸೇವೆಗೆ ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದ್ದರು. ಆ ಮನವಿಯನ್ನು ಇಲಾಖೆ ತಿರಸ್ಕರಿಸಿತ್ತು.
ದ್ವಿಪತ್ನಿತ್ವದ ಅಥವಾ ಎರಡನೇ ಮದುವೆಯಾಗಿದ್ದ ಆರೋಪ ಇದ್ದರೆ ಮಾತ್ರ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬಹುದಿತ್ತು. ಆಧರೆ, ಪೊಲೀಸ್ ಅಧಿಕಾರಿ ಕೇವಲ ಇನ್ನೊಬ್ಬಾಕೆ ಜೊತೆಗೆ ಸಹಜೀವನದಲ್ಲಿ ಇದ್ದರು. ಈ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾ ಮಾಡಿರುವ ಕ್ರಮ ಸರಿಯಲ್ಲ ಎಂಬುದು ಅರ್ಜಿದಾರ ಪರ ವಕೀಲರ ವಾದವಾಗಿತ್ತು.
ಆದರೆ, ಪೊಲೀಸ್ ಅಧಿಕಾರಿಯು ಮದುವೆಯಾಗಿದ್ದರೂ ಅಕ್ರಮ ಸಂಬಂಧ ಹೊಂದಿರುವುದು ದೃಢಪಟ್ಟಿದೆ. ಇದು ಜಾರ್ಖಂಡ್ ಸೇವಾ ಸಂಹಿತೆ ಮತ್ತು ಪೊಲೀಸ್ ಕೈಪಿಡಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸರಕಾರಿ ಪರ ವಕೀಲರು ವಾದಿಸಿದ್ದರು.