ಪರಾರಿಯಾದ ಆರೋಪಿಯ ಆಸ್ತಿ ಮುಟ್ಟುಗೋಲು: ಆತನಿಗೆ ಸೇರಿದ್ದರೆ ಮಾತ್ರ ಮುಟ್ಟುಗೋಲು ಆದೇಶ- ಹೈಕೋರ್ಟ್ ಮಹತ್ವದ ತೀರ್ಪು
ಪರಾರಿಯಾದ ಆರೋಪಿಯ ಆಸ್ತಿ ಮುಟ್ಟುಗೋಲು: ಆತನಿಗೆ ಸೇರಿದ್ದರೆ ಮಾತ್ರ ಮುಟ್ಟುಗೋಲು ಆದೇಶ- ಹೈಕೋರ್ಟ್ ಮಹತ್ವದ ತೀರ್ಪು
ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಆತನಿಗೆ ಸೇರದೇ ಇದ್ದರೆ ಆತ ಅಲ್ಲಿ ಕೇವಲ ವಾಸಿಸುತ್ತಿದ್ದ ಎಂದ ಮಾತ್ರಕ್ಕೆ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ಅಬ್ದುಲ್ ಮೊಯಿನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತಲೆಮರೆಸಿಕೊಂಡಿದ್ದ ಎಂದು ಘೋಷಿಸಲಾದ ಆರೋಪಿ ವ್ಯಕ್ತಿ ವಾಸಿಸುತ್ತಿದ್ದ ಎರಡು ಕೊಠಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ(CrPC)ಯ ಸೆಕ್ಷನ್ 83ರ ಪ್ರಕಾರ ಮುಟ್ಟುಗೋಲು (ಪ್ರೊಕ್ಲಮೇಶನ್) ಆದೇಶ ಕೇವಲ ಆತನ ಮಾಲಕತ್ವದ ಆಸ್ತಿಗೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಪೀಠ ಹೇಳಿದ್ದು, ಮೇಲ್ಮನವಿಯನ್ನು ಪುರಸ್ಕರಿಸಿ ಮುಟ್ಟುಗೋಲು ಆದೇಶವನ್ನು ರದ್ದುಗೊಳಿಸಿದೆ.
ಆರೋಪಿ ವಾಸವಿದ್ದ ಎರಡು ಕೊಠಡಿಗಳನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ವಿಚಾರಣಾ ನ್ಯಾಯಾಲಯದ ತೀರ್ಪು ಅರ್ಥಹೀನವಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯದ ಆದೇಶವನ್ನು ವಿರೋಧಿಸಿದ ಮೇಲ್ಮನವಿದಾರರು, ಮುಟ್ಟುಗೋಲು ಹಾಕಲು ಆದೇಶಿಸಲಾದ ಆಸ್ತಿಯ ಏಕಮಾತ್ರ ಮಾಲಕ ತಾನಾಗಿದ್ದು, ಈ ಆಸ್ತಿಗೂ ತನ್ನ ಮಗ ಫೈಜ್‌ಗೂ ಸಂಬಂಧ ಇಲ್ಲ ಎಂದು ವಾದಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ಅರ್ಜಿದಾರರ ವಾದವನ್ನು ತಿರಸ್ಕರಿಸಿತ್ತು.
ಪ್ರಕರಣ: ಫಯಾಜ್ ಅಬ್ಬಾಸ್ Vs ಉತ್ತರ ಪ್ರದೇಶ ಸರ್ಕಾರ (ಅಲಹಾಬಾದ್ ಹೈಕೋರ್ಟ್)