ವೇಶ್ಯಾಗೃಹ ಕಾನೂನುಬದ್ಧವಲ್ಲ: ಸ್ವತಃ ವೇಶ್ಯಾವಾಟಿಕೆ ನಡೆಸುತ್ತಿದ್ದ ವಕೀಲನಿಗೆ ದಂಡ ಸಹಿತ ಹೈಕೋರ್ಟ್ ಛೀಮಾರಿ; ಈತ ವಕೀಲ ಸಮುದಾಯಕ್ಕೆ ಕಳಂಕ ಎಂದು ನ್ಯಾಯಪೀಠ
ವೇಶ್ಯಾಗೃಹ ಕಾನೂನುಬದ್ಧವಲ್ಲ: ಸ್ವತಃ ವೇಶ್ಯಾವಾಟಿಕೆ ನಡೆಸುತ್ತಿದ್ದ ವಕೀಲನಿಗೆ ದಂಡ ಸಹಿತ ಹೈಕೋರ್ಟ್ ಛೀಮಾರಿ; ಈತ ವಕೀಲ ಸಮುದಾಯಕ್ಕೆ ಕಳಂಕ ಎಂದು ನ್ಯಾಯಪೀಠ
ವಕೀಲರೊಬ್ಬರು ವೇಶ್ಯಾವಾಟಿಕೆ ಅಡ್ಡೆಯನ್ನು ನಡೆಸುತ್ತಿದ್ದು, ಅದಕ್ಕೆ ಪೊಲೀಸರಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿರುವ ಘಟನೆ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಸ್ವತಃ ಮದ್ರಾಸ್ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.
ಮಾತ್ರವಲ್ಲ, ಅರ್ಜಿ ಸಲ್ಲಿಸಿದ ವಕೀಲ ನಿಜವಾಗಿಯೂ ನೋಂದಾಯಿತ ವಕೀಲನೇ ಎನ್ನುವ ಬಗ್ಗೆ ಆತನ ನೋಂದಣಿ ಪತ್ರದ ನೈಜತೆ ಪರಿಶೀಲಿಸುವಂತೆ ತಮಿಳುನಾಡು ಮತ್ತುಪುಚುಚೇರಿ ವಕೀಲರ ಪರಿಷತ್ತಿಗೆ ಅದು ನಿರ್ದೇಶನ ನೀಡಿದೆ.
ಈ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾ. ಬಿ. ಪುಗುಳೇಂದಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ವಕೀಲರಿಗೆ ರೂ. 10,000/- ದಂಡ ವಿಧಿಸಿದೆ.
ಈತ ವಕೀಲ ಸಮುದಾಯದ ಖ್ಯಾತಿಗೆ ಮಸಿ ಬಳೆಯುತ್ತಿದ್ದಾನೆ. ಈತನ ಬಗ್ಗೆ ಗಮನಹರಿಸಲು ವಕೀಲರ ಪರಿಷತ್ತಿಗೆ ಇದು ಸಕಾಲ ಎಂದು ಹೇಳಿರುವ ನ್ಯಾಯಪೀಠ, ಅಧಿಕೃತ ಕಾಲೇಜುಗಳಿಂದ ಶಿಕ್ಷಣ ಮುಗಿಸಿದ ಪದವೀಧರರನ್ನು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ತಾನು ಫ್ರೆಂಡ್ಸ್ ಫಾರ್ ಎವರ್ ಎಂಬ ಟ್ರಸ್ಟ್ ಸ್ಥಾಪಿಸಿದ್ದೇನೆ. ಈ ಟ್ರಸ್ಟ್‌ನ ಮುಖ್ಯ ಉದ್ದೇಶ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ತೈಲ ಅಭ್ಯಂಜನ ಮತ್ತು ಇತರ ಲೈಂಗಿಕ ಸೇವೆಯಂತ ವಯಸ್ಕರ ಮನರಂಜನೆ ಚಟುವಟಿಕೆಗಳನ್ನು ನಡೆಸುವುದಾಗಿದೆ ಎಂದು ಅರ್ಜಿದಾರ ವಕೀಲ ರಾಜಾ ಮುರುಗನ್ ಹೇಳಿಕೊಂಡಿದ್ದ.
ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್ ಮೇಲೆ ದಾಳಿ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಲೈಂಗಿಕ ಚಟುವಟಿಕೆ ಅನೈತಿಕ ಮಾನವ ಕಳ್ಳ ಸಾಗಾಟ ತಡೆ ಕಾಯ್ದೆ ಕಾನೂನು ಬಾಹಿರ ಎಂದು ಘೋಷಿಸಿಲ್ಲ ಎಂದು ವಾದಿಸಿದ್ದ ವಕೀಲ ಬುದ್ಧದೇವ್ ಕರ್ಮಾಸ್ಕರ್ Vs ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣವನ್ನು ಉಲ್ಲೇಖಿಸಿದ್ದ.
ಆದರೆ, ಅರ್ಜಿದಾರ ಈ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿರುವ ನ್ಯಾಯಪೀಠ, ಸುಪ್ರೀಂಕೋರ್ಟ್‌ನ ಈ ತೀರ್ಪು ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸುವ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಹೇಳಿದೆ.