ಬಾಂಬ್ ಸ್ಫೋಟ: ಆರೋಪಿಗಳಿಗೆ ತ.ನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ನಿಮಗೆ ಹೇಳಿದ್ದು ಯಾರು?: ಶೋಭಾ ಕರಂದ್ಲಾಜೆಗೆ ಹೈಕೋರ್ಟ್ ಪ್ರಶ್ನೆ
ಬಾಂಬ್ ಸ್ಫೋಟ: ಆರೋಪಿಗಳಿಗೆ ತ.ನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ನಿಮಗೆ ಹೇಳಿದ್ದು ಯಾರು?: ಶೋಭಾ ಕರಂದ್ಲಾಜೆಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟದ ಆರೋಪಿಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ನಿಮಗೆ ಹೇಳಿದ್ದು ಯಾರು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದೆ.
ಶೋಭಾ ಹೇಳಿಕೆ ಕುರಿತು ಸ್ಥಳೀಯರೊಬ್ಬರು ಮಧುರೈ ಸೈಬರ್ ಕ್ರೈಂಗೆ ದೂರು ನೀಡಿದ್ದು, ಈ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ. ಜಯಚಂದ್ರನ್ ಅವರಿದ್ದ ನ್ಯಾಯಪೀಠ ಶೋಭಾ ಅವರಿಗೆ ಈ ಪ್ರಶ್ನೆ ಕೇಳಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(NIA) ತನಿಖೆ ಕೈಯಗೊಳ್ಳುವ ಮೊದಲೇ ಶೋಭಾ ಅವರು ಈ ಹೇಳಿಕೆ ನೀಡಿದ್ದಾರೆ. ಅಂದರೆ, ಅವರಿಗೆ ಪ್ರಕರಣದ ಸತ್ಯ ತಿಳಿದಿದೆ ಎಂದಾಯಿತು. ತರಬೇತಿ ಪಡೆದ ವ್ಯಕ್ತಿಗಳು ಯಾರು..? ಅವರಿಗೆ ತರಬೇತಿ ನೀಡಿದವರು ಯಾರು..? ಮತ್ತು ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಇದೆ ಎಂಬ ಮಾಹಿತಿ ಇದೆ ಎಂದಾಯಿತು ಎಂದು ನ್ಯಾಯಪೀಠ ಹೇಳಿದೆ.
ಈ ಬಗ್ಗೆ ಮಾಹಿತಿ ಇದ್ದರೆ, ಅಥವಾ ಸಿಕ್ಕಿದ್ದರೆ ಅದನ್ನು ಶೋಭಾ ಅವರು ಪೊಲೀಸರಿಗೆ ಬಹಿರಂಗಪರಿಸಬೇಕಿತ್ತು. ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಸಚಿವೆ ಶೋಭಾ ಕರಂದ್ಲಾಜೆ ಅದನ್ನು ಮಾಡಿಲ್ಲ ಎಂದು ನ್ಯಾಯಮೂರ್ತಿ ಮೌಖಿಕವಾಗಿ ಹೇಳಿದರು.
ಪ್ರಕರಣ ರದ್ದುಪಡಿಸುವ ಶೋಭಾ ಅವರ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ವಕೀಲರು, ವೀಡಿಯೋ ತುಣುಕು ವೀಕ್ಷಿಸುವಂತೆ ಕೋರಿಕೊಂಡರು. ತಮಿಳುನಾಡು ಭಾಗಿಯಾದ ಬಗ್ಗೆ ಎನ್‌ಐಎ ಈ ವರೆಗೆ ಹೇಳಿಯೇ ಇಲ್ಲ. ಆದರೆ, ಯಾವುದೇ ಆಧಾರವಿಲ್ಲದೆ ಸಚಿವರು ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ನಿವೇದಿಸಿಕೊಂಡರು.