ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ: ಪ್ರಿಯಕರ, ಮೂವರು ಸಹಚರರ ಸಹಿತ ಜೀವಾವಧಿ ಶಿಕ್ಷೆ ಪ್ರಕಟಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ
ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ: ಪ್ರಿಯಕರ, ಮೂವರು ಸಹಚರರ ಸಹಿತ ಜೀವಾವಧಿ ಶಿಕ್ಷೆ ಪ್ರಕಟಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ
ಸುಪಾರಿ ನೀಡಿ ಪತಿಯನ್ನೇ ಹತ್ಯೆ ಮಾಡಿಸಿದ ಪತ್ನಿ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದ ಅವರ ನಾಲ್ವರು ಸಹಚರರಿಗೆ ಮಂಗಳೂರು ಜಿಲ್ಲಾ 6ನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ
ಪಾವೂರು ಇನ್ನೋಳಿ ನಿವಾಸಿ 59 ವರ್ಷದ ಇಸ್ಮಾಯಿಲ್ ಅವರು 2016ರ ಫೆಬ್ರವರಿ 16ರಂದು ಕೊಲೆಗೀಡಾಗಿದ್ದರು. ಈ ಬಗ್ಗೆ ನೀಡಲಾದ ದೂರನ್ನು ಆಧರಿಸಿ ಅಂದಿನ ಕೊಣಾಜೆ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಆರೋಪಿಗಳಾದ ಉಳ್ಳಾಲದ ಅಬ್ದುಲ್ ಮುನಾಫ್ ಯಾನೆ ಮುನ್ನ, ಅಬ್ದುಲ್ ರಹಿಮಾನ್, ಬೋಳಿಯಾರಿನ ಶಬ್ಬೀರ್ ಯಾನೆ ಶಬ್ಬಿ, ಕುತ್ತಾರು ಪದವಿನ ಜಮಾಲ್ ಅಹ್ಮದ್ ಹಾಗೂ ಇಸ್ಮಾಯಿಲ್ ಅವರ ಎರಡನೇ ಪತ್ನಿ 40 ವರ್ಷದ ನೆಬಿಸಾ ಅವರು ಆರೋಪಿಗಳಾಗಿದ್ದರು.
ಪ್ರಕರಣದಲ್ಲಿ ಹಾಜರುಪಡಿಸಲಾದ ಸಾಕ್ಷ್ಯಗಳನ್ನು ವಿಚಾರಣೆ ನಡೆಸಿದ ಆರನೇ ಹೆಚ್ಚುರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜ್ ಎಸ್.ವಿ. ಅವರು ಅಪರಾಧಿಗಳಿಗೆ ಎರಡು ಲಕ್ಷ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದರು.
ಸರ್ಕಾರಿ ವಕೀಲರಾದ ಜುಡಿತ್ ಎಂ. ಕ್ರಾಸ್ತಾ, ಜ್ಯೋತಿ ಪಿ. ನಾಯಕ್ ಸಾಕ್ಷ್ಯ ವಿಚಾರಣೆ ನಡೆಸಿದ್ದರು. ಶೇಖರ್ ಶೆಟ್ಟಿ ಮತ್ತು ಚೌಧರಿ ಮೋತಿಲಾಲ್ ಅವರು ವಾದ ಮಂಡಿಸಿದ್ದರು.
ಸುಪಾರಿ ನೀಡಲು ಕಾರಣ?
ಹತ್ಯೆಗೀಡಾದ ಇಸ್ಮಾಯಿಲ್ ಅವರ ಎರಡನೇ ಪತ್ನಿ ನೆಬಿಸಾ ಕುತ್ತಾರು ಪದವಿನ ಜಮಾಲ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ಬಗ್ಗೆ ಪತಿ-ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಗಂಡನ ಅಡ್ಡಿಯನ್ನು ನಿವಾರಿಸಲು ನಿರ್ಧರಿಸಿದ ನೆಬಿಸಾ ಪ್ರಿಯಕರ ಅಬ್ದುಲ್ ಮತ್ತು ರಹಿಮಾನ್ ಅವರಿಗೆ ಗಂಡನನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ಇವರ ತಂಡ ದೇರಳಕಟ್ಟೆಯಲ್ಲಿ ಒಟ್ಟು ಸೇರಿ ಸಂಚು ರೂಪಿಸಿ ಪತಿ ಇಸ್ಮಾಯಿಲ್ ಅವರನ್ನು ಹತ್ಯೆ ಮಾಡಿದ್ದರು.
ಇಸ್ಮಾಯಲ್ ಮತ್ತು ನೆಬಿಸಾ ದಂಪತಿಗೆ ಒಬ್ಬ ಪುತ್ರಿ ಹಾಗೂ ಮೂವರು ಪುತ್ರರಿದ್ದು, ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪರಿಹಾರ ಪಡೆಯಬಹುದು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.