ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳ ನೇಮಕ
ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳ ನೇಮಕ
ಇಬ್ಬರು ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿದ್ದಾರೆ. ನ್ಯಾ. ನೋಂಗ್‌ಮೀಕಾಪಂ ಕೋಟಿಶ್ವರ ಸಿಂಗ್ ಮತ್ತು ಆರ್. ಮಹಾದೇವನ್ ಅವರೇ ಈ ಇಬ್ಬರು ನ್ಯಾಯಮೂರ್ತಿಗಳು.
ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಪದೋನ್ನತಿ ಹೊಂದಿದ ಈ ಇಬ್ಬರು ನ್ಯಾಯಮೂರ್ತಿಗಳು ಕ್ರಮವಾಗಿ ಜಮ್ಮು ಕಾಶ್ಮೀರ ಮತ್ತು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಸಿಂಗ್ ಅವರು ಮಣಿಪುರ ರಾಜ್ಯದವರಾಗಿದ್ದಾರೆ. ಈ ರಾಜ್ಯದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.
ಮಹದೇವನ್ ಪ್ರಸ್ತುತ ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿದ್ಧಾರೆ. ಮಹಾದೇವನ್ ಅವರು ಮೂಲತಃ ತಮಿಳು ನಾಡು ರಾಜ್ಯದವರಾಗಿದ್ದು ಹಿಂದುಳಿದ ಸಮುದಾಯಕ್ಕೆ ಸೇರಿದವರು.
ನ್ಯಾ. ಅನಿರುದ್ಧ ಬೋಸ್ ಮತ್ತು ನ್ಯಾ. ಎ.ಎಸ್. ಬೋಪಣ್ಣ ಅವರು ನಿವೃತ್ತರಾದ ಕಾರಣ ಎರಡು ಖಾಲಿಯಾದ ಹುದ್ದೆಗಳಿಗೆ ಇವರಿಬ್ಬರ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಜುಲೈ 11ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳಿರುವ ಕೊಲೀಜಿಯಂ ಈ ಶಿಫಾರಸ್ಸು ಮಾಡಿತ್ತು.
ಈ ನೇಮಕದ ನಂತರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಬಲ ಮತ್ತೆ 34ಕ್ಕೇರಿದೆ.