-->
ಪ್ರಮಾಣೀಕರಿಸದ ವಾಟ್ಸ್ಯಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಬಹುದೇ..? ಹೈಕೋರ್ಟ್ ಮಹತ್ವದ ತೀರ್ಪು

ಪ್ರಮಾಣೀಕರಿಸದ ವಾಟ್ಸ್ಯಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಬಹುದೇ..? ಹೈಕೋರ್ಟ್ ಮಹತ್ವದ ತೀರ್ಪು

ಪ್ರಮಾಣೀಕರಿಸದ ವಾಟ್ಸ್ಯಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಬಹುದೇ..? ಹೈಕೋರ್ಟ್ ಮಹತ್ವದ ತೀರ್ಪು





ಭಾರತೀಯ ಸಾಕ್ಷ್ಯ ಅಧಿನಿಯಮದ ಅಡಿಯಲ್ಲಿ ಸೂಕ್ತ ರೀತಿಯಲ್ಲಿ ಪ್ರಮಾಣೀಕರಿಸದ ವಾಟ್ಸ್ಯಾಪ್ ಸಂದೇಶಗಳನ್ನು ಯಾ ಸಂಭಾಷಣೆಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿಸಲಾಗದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.


ದೆಹಲಿ ಹೈಕೋರ್ಟ್‌ನ ನ್ಯಾ. ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಪ್ರಕರಣದ ವಿವರ:

ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಎಲೆಕ್ಟ್ರಾನಿಕ್ಸ್ ಕಂಪೆನಿ ಡೆಲ್ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿಖಿತ ಹೇಳಿಕೆ ಸಲ್ಲಿಸುವಲ್ಲಿ ಏಳು ದಿನಗಳ ವಿಳಂಬವಾಗಿತ್ತು.


ವಿಳಂಬಕ್ಕೆ ಕಾರಣವನ್ನು ವಿವರಿಸಿದ್ದ ಡೆಲ್ ಇಂಟರ್‌ನ್ಯಾಷನಲ್, ಜಿಲ್ಲಾ ಆಯೋಗದ ಮುಂದೆ ದೂರುದಾರರನ್ನು ಪ್ರತಿನಿಧಿಸಿದ್ದ ವಕೀಲರು ಸಂಪೂರ್ಣ ದೂರಿನ ಪ್ರತಿ ಮತ್ತು ಅದರ ಅನುಬಂಧವನ್ನು ಸೂಕ್ತ ಸಮಯದಲ್ಲಿ ನೀಡಲಿಲ್ಲ ಎಂದು ವಾದಿಸಿತ್ತು. ಈ ವಾದದ ಸಮರ್ಥನೆಗಾಗಿ ಅದು ದೂರುದಾರರೊಂದಿಗೆ ನಡೆಸಿದ ವಾಟ್ಸ್ಯಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳನ್ನು ಸಲ್ಲಿಸಿತ್ತು.


ಆದರೆ, ಈ ಸ್ಕ್ರೀನ್ ಶಾಟ್ ಸಂಭಾಷಣೆಯನ್ನು ಸಾಕ್ಷಿಯನ್ನಾಗಿ ಸ್ವೀಕರಿಸಲು ಗ್ರಾಹಕರ ಆಯೋಗ ನಿರಾಕರಿಸಿ ಡೆಲ್‌ನ ಲಿಖಿತ ಹೇಳಿಕೆಯನ್ನು ದಾಖಲಿಸಲು ಒಪ್ಪಲಿಲ್ಲ. ಮತ್ತು ಲಿಖಿತ ಹೇಳಿಕೆಯ ವಿಳಂಬವನ್ನು ಮನ್ನಿಸಲು ಸಲ್ಲಿಸಿದ್ದ ಅರ್ಜಿ ವಿಶ್ವಾಸಾರ್ಹವಲ್ಲ ಎಂದು ಜಿಲ್ಲಾ ಆಯೋಗ ಆದೇಶ ಹೊರಡಿಸಿತ್ತು.


ವಿಳಂಬ ಮನ್ನಿಸಲು ಒಪ್ಪದಿರುವ ಜಿಲ್ಲಾ ಆಯೋಗದ ಆದೇಶವನ್ನು ಪ್ರಶ್ನಿಸಿ ರಾಜ್ಯ ಆಯೋಗದ ಮೆಟ್ಟಲೇರಿತ್ತು. ಜಿಲ್ಲಾ ಆಯೋಗದ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದ ರಾಜ್ಯ ಆಯೋಗ, ಡೆಲ್ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲಿಯೂ ಹಿನ್ನಡೆಯಾದ ಕಾರಣ, ಡೆಲ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.


ಸಂವಿಧಾನದ 226ನೇ ವಿಧಿಯಡಿ ರಿಟ್ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯ ವಾಟ್ಸ್ಯಾಪ್ ಸಂಭಾಷಣೆಗಳ ಸ್ಕ್ರೀನ್ ಶಾಟ್‌ನ್ನು ಗಣನೆಗೆ ತೆಗೆದುಕೊಳ್ಳಲಾಗದು. ಈ ಸಂಭಾಷಣೆಗಳನ್ನು ಹಾಜರುಪಡಿಸುವಾಗ ಯಾವುದೇ ಸರ್ಟಿಫಿಕೇಷನ್ ಇಲ್ಲದಿರುವುದನ್ನು ರಾಜ್ಯ ಆಯೋಗದ ಮುಂದೆ ಪ್ರಸ್ತುತಪಡಿಸಲಾಗಿದೆ. ಹಾಗಾಗಿ, ರಿಟ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂಬುದು ನ್ಯಾಯಾಲಯಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.


ಡೆಲ್ ಸ್ವೀಕರಿಸಿದ ಸಮನ್ಸ್‌ನೊಂದಿಗೆ ಕಳುಹಿಸಲಾದ ಅಂಚೆ ರಸೀದಿಗಳನ್ನು ಪಡೆದ ಜಿಲ್ಲಾ ಗ್ರಾಹಕರ ಆಯೋಗ, ಪ್ರಕರಣವನ್ನು ಬಹಳ ವಿವರವಾಗಿ ಪರಿಶೀಲಿಸಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಸಂಪೂರ್ಣ ದಾಖಲೆಗಳ ಸಹಿತ ಸಮನ್ಸ್ ಕಳುಹಿಸಲಾಗಿದ್ದು, ಅದು ಡೆಲ್‌ಗೆ ಕಾನೂನುರೀತ್ಯಾ ದೊರೆತಿದೆ ಎಂಬುದಾಗಿ ಜಿಲ್ಲಾ ಆಯೋಗ ತೀರ್ಮಾನಕ್ಕೆ ಬಂದಿರುವುದು ಸರಿಯಾಗಿಯೇ ಇದೆ.


ಪ್ರಕರಣ: ಡೆಲ್ ಇಂಟರ್‌ನ್ಯಾಷನಲ್ ಸರ್ವಿಸಸ್ ಪ್ರೈ.ಲಿ. Vs ಆದಿಲ್ ಫಿರೋಜ್ ಮತ್ತಿತರರು

(ದೆಹಲಿ ಹೈಕೋರ್ಟ್‌)

Ads on article

Advertise in articles 1

advertising articles 2

Advertise under the article