10 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ ನೌಕರರ ಖಾಯಮಾತಿ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
10 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ ನೌಕರರ ಖಾಯಮಾತಿ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮಹತ್ವದ ಬೆಳವಣಿಗೆಯೊಂದರಲ್ಲಿ ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಕೆಲಸ ಮಾಡಿದ್ದ ನೌಕರರನ್ನು ಖಾಯಂ ಮಾಡಲು ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಈ ನೌಕರರೂ ಖಾಯಮಾತಿಗೆ ಅರ್ಹರಾಗಿದ್ದು, ಮೂರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ನ ನ್ಯಾ. ಬಿ.ಎಂ. ಶ್ಯಾಮಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.
ಸೇವೆ ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಹಿಂಬರಹ ನೀಡಿತ್ತು. ಈ ಹಿಂಬರಹವನ್ನು ಪ್ರಶ್ನಿಸಿ ಮೈಸೂರಿನ ಶಾಂತಲಕ್ಷ್ಮಿ ಹಾಗೂ ಇತರರು ಪ್ರತ್ಯೇಕವಾಗಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮಾನ್ಯ ನ್ಯಾ. ಶ್ಯಾಮ್‌ಪ್ರಸಾದ್ ಅವರಿದ್ದ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.
ಒಂದೇ ಬಗೆಯ ಉದ್ಯೋಗ ಮಾಡುವವರನ್ನು ಭಿನ್ನ ರೀತಿಯಲ್ಲಿ ಪರಿಗಣಿಸಲಾಗದು. ಅರ್ಜಿದಾರು 10 ವರ್ಷಗಳಿಗೂ ಅಧಿಕ ಕಾಲ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹಂಗಾಮಿ ನೌಕರರನ್ನಾಗಿಯೇ ಮುಂದುವರಿಸಲು ಸಾಧ್ಯವಿಲ್ಲ. ಅವರಿಗೆ ಅರ್ಹ ವೇತನ ಹಾಗೂ ಭತ್ಯೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ, ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಇವರು ಸೇವೆಯ ಖಾಯಮಾತಿಗೆ ಅರ್ಹರು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
2002/2005ರ ಯೋಜನೆಗಳಂತೆ ಅರ್ಜಿದಾರರು ಸೇವೆ ಖಾಯಮಾತಿಗೆ ಅರ್ಹರಾಗಿದ್ದಾರೆ. ಅವರ ಸೇವೆ ಖಾಯಂ ಗೊಂಡಿಸದ್ದು, ಅವರ ಕೆಲಸದ ಸ್ವರೂಪ ಮತ್ತು ಸೇವೆ ಮುಂದುವರಿಕೆ ಬಗ್ಗೆ ನಿರ್ಧರಿಸಬೇಕಾಗಿದೆ. ಅರ್ಜಿದಾರರನ್ನು ಇತರ ಸಿಬ್ಬಂದಿಯಂತೆ ಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಸೇವೆಯ ಖಾಯಂಗೆ ಅರ್ಹರಲ್ಲ ಎಂಬ 2010ರ ಜೂನ್ 14 ಮತ್ತು 2012ರ ಜೂನ್ 15ರಂದು ನೀಡಿದ್ದ ಹಿಂಬರಹವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ರದ್ದುಗೊಳಿಸಿದೆ.
ಪ್ರಕರಣ: ಶಾಂತಲಕ್ಷ್ಮಿ Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, WP 40204/2012 Dated 22-07-2024