-->
ಕರಿಮನೆಯ ಕತ್ತಲಲ್ಲಿ ನಿವೃತ್ತ ನೌಕರರು: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ಅನ್ಯಾಯ- ಹರೀಶ್ ಕಟ್ಟೇಬೆಳಗುಲಿ

ಕರಿಮನೆಯ ಕತ್ತಲಲ್ಲಿ ನಿವೃತ್ತ ನೌಕರರು: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ಅನ್ಯಾಯ- ಹರೀಶ್ ಕಟ್ಟೇಬೆಳಗುಲಿ

ಕರಿಮನೆಯ ಕತ್ತಲಲ್ಲಿ ನಿವೃತ್ತ ನೌಕರರು: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ಅನ್ಯಾಯ- ಹರೀಶ್ ಕಟ್ಟೇಬೆಳಗುಲಿ





ದಿನಾಂಕ:1-7-2022 ರಿಂದ ದಿನಾಂಕ:31-7-2024 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸರ್ಕಾರಿ ಆದೇಶ ಸಂಖ್ಯೆ ಆಇ 21 ಎಸ್ ಆರ್ ಪಿ 2024 ದಿನಾಂಕ:22-7-2024 ರಲ್ಲಿ ರಾಜ್ಯ ಸರ್ಕಾರ ಅನುಷ್ಟಾನ ಮಾಡಿರುವ 7 ನೇ ವೇತನ ಆಯೋಗದಲ್ಲಿ ತುಂಬಾ ಅನ್ಯಾಯವಾಗಿದೆ.


ಈ ವೇತನ ಶ್ರೇಣಿಯ ನಿಗದಿಯನ್ನು ದಿನಾಂಕ:1-7-2022 ರಿಂದ ಕಾಲ್ಪನಿಕವಾಗಿ ನಿಗದಿ ಮಾಡುವಂತೆ ಎಂದು ಆದೇಶ ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಆರ್ಥಿಕ ಸೌಲಭ್ಯವನ್ನು ದಿನಾಂಕ:1-8-2024 ರಿಂದ ನೀಡುವಂತೆ ಸೂಚಿಸುತ್ತದೆ. ಇದು ಯಾವರೀತಿಯ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ?


ಇದಷ್ಟೇ ಅಲ್ಲದೆ ಈ 25 ತಿಂಗಳ ಅವಧಿಯಲ್ಲಿ ನಿವೃತ್ತರಾದ, ನಿಧನರಾದ, ಸೇವೆಯಿಂದ ಮುಕ್ತಿ ಹೊಂದಿದವರ ಪಡಿಪಾಟಲಿನ ಬಗ್ಗೆ ಆಡಳಿತ ವ್ಯವಸ್ಥೆ ಯೋಚಿಸುವುದೇ ಇಲ್ಲ ! ಆದ್ದರಿಂದ ಇಂತಹ ವೇತನ ಶ್ರೇಣಿಗಳ ಅನುಷ್ಟಾನಗಳು ಯಾವ ಪುರುಷಾರ್ಥವನ್ನು ಈಡೇರಿಸುತ್ತವೆ ಎಂದೆನಿಸುತ್ತದೆ? ಸುದೀರ್ಘವಾಗಿ ಸರ್ಕಾರಿ ಸೇವೆ ಮಾಡಿ ಆಡಳಿತದ ಘನತೆ ಕಾಪಾಡಿ ನಿವೃತ್ತರಾದ, ನಿಧನರಾದ ನೌಕರರು ಸರ್ಕಾರಿ ನೌಕರರಲ್ಲವೇ? ಅಥವಾ ಆಡಳಿತ ವಿರೋಧಿ ಮನೋಧರ್ಮದ ನೌಕರರೇ, ಏಕೆ ಈ ತಾರತಮ್ಯದ ನೀತಿ ಅರ್ಥವಾಗುತ್ತಿಲ್ಲ.


ಈ ಆದೇಶದ ಪ್ರಕಾರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು 1-7-2022 ರಿಂದ ಕಾಲ್ಪನಿಕವಾಗಿ ನಿಗದಿ ಮಾಡಿ ಆರ್ಥಿಕ ಸೌಲಭ್ಯವನ್ನು 1-8-2024 ರಿಂದ ನೀಡಿದರೆ ಈ ಅವಧಿಯಲ್ಲಿ ನಿವೃತ್ತರಾದ ನೌಕರರು ಪರಿಷ್ಕೃತ ಡಿ ಸಿ ಆರ್ ಜಿ. ಕಮ್ಯೂಟೇಷನ್, ಗಳಿಕೆ ರಜೆ ನಗದೀಕರಣ ಸೌಲಭ್ಯದಿಂದ ವಂಚಿತರಾಗುತ್ತಾರೆಂಬ ವೈಜ್ಞಾನಿಕ ಅಲೋಚನೆ ಬೇಡವೆ. ಈ ಅವಧಿಯಲ್ಲಿ ನಿವೃತ್ತಿ, ನಿಧನರಾದ ನೌಕರರಿಗೆ ಆರ್ಥಿಕ ಸೌಲಭ್ಯವನ್ನು ನಿವೃತ್ತಿ ದಿನಾಂಕಕ್ಕೆ ಅವರು ಪಡೆಯುವ ಪರಿಷ್ಕೃತ ವೇತನಕ್ಕೆ ಸಂವಾದಿಯಾಗಿ ಲಭ್ಯವಾಗುತ್ತದೆಂದು ಏಕೆ ದಾಖಲಿಸಲಿಲ್ಲ. ಆದ್ದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರು, ನಿಧನ ಹೊಂದಿದ ನೌಕರರ ಅವಲಂಬಿತರು ತೊಂದರೆಗೆ ಒಳಗಾಗಬೇಕಾಗಿದೆ.


ನಮ್ಮ ನೆಲದ ದಾರ್ಶನಿಕ ಮಹಾಕವಿ ಶ್ರೀ ಕುವೆಂಪುರವರ ಕವಿತೆಯ ಸಾಲೊಂದಿದೆ

                “ ಜೀವನದ ಕರಿಮನೆಯ ಕತ್ತಲಲಿ ಕಿರಣವೊಂದನು

                    ತಂದು ಭರವಸೆಯನೀಯುವಾತನೇ ಋಷಿ ”

ಎನ್ನುವ ಮಾತು ನಿವೃತ್ತ ನೌಕರರ ಸಂದರ್ಭಕ್ಕೆ ಪ್ರಸ್ತುತ ಅನಿಸುತ್ತಿದೆ. ನಿವೃತ್ತಿಯ ಕರಿಮನೆಯ ಕತ್ತಲಲಿ ಇರುವ ನೌಕರರಿಗೆ ಪರಿಷ್ಕೃತ ವೇತನದ ದರದಲ್ಲಿ ಡಿ ಸಿ ಆರ್ ಜಿ, ಕಮ್ಯೂಟೇಷನ್, ಗಳಿಕೆ ರಜೆ ನಗದೀಕರಣವನ್ನು ನೀಡುವ ಮೂಲಕ ಬರವಸೆಯ ಕಿರಣವಾಗಬೇಕಾದ ಸರ್ಕಾರ ಹಳೆಯ ವೇತನ ಶ್ರೇಣಿಯಲ್ಲೇ ಡಿ ಸಿ ಆರ್ ಜಿ, ಕಮ್ಯೂಟೇಷನ್, ಗಳಿಕೆ ರಜೆ ನಗದೀಕರಣವನ್ನು ನೀಡುವ ಮೂಲಕ ನಿವೃತ್ತ ನೌಕರರನ್ನು ಮತ್ತಷ್ಟು ಕರಿಮನೆಯ ಕತ್ತಲಿಗೆ ದೂಡಿ ಅವರ ನಿವೃತ್ತ ಬದುಕನ್ನು ನರಕ ಮಾಡುತ್ತಿದೆ.


ಭಾರತದ ಸರ್ವೋಚ್ಚ ನ್ಯಾಯಾಲಯವು ಪ್ರಕರಣ ಸಂಖ್ಯೆ: AIR 1983 SC 130ರಲ್ಲಿ

“ A pension scheme consistent with available resource must provide that the pensioner would be able to live: (i) free from want, with decency, independence and self-respect, and (ii) at a standard equivalent at the pre-retirement level.” And further that “pension is not an ex-gratia payment but payment for past services rendered” and, pension for a retiree “is neither a bounty nor a matter of grace depending upon the sweet will of the employer ”


“ ನಿವೃತ್ತಿ ವೇತನವು ಸಾಮಾಜಿಕ ಕಲ್ಯಾಣ ಕ್ರಮವಾಗಿದ್ದು, ವೃದ್ದಾಪ್ಯದಲ್ಲಿ ಉದ್ಯೋಗದಾತನು ನನ್ನ ಕೈ ಬಿಡುವುದಿಲ್ಲ ಎಂಬ ಬರವಸೆಯ ಮೇಲೆ ತಮ್ಮ ಜೀವನದ ಉಚ್ಛ್ರಾಯ ಸ್ಥಿತಿಯಲ್ಲಿ ನಿರಂತರವಾಗಿ ಶ್ರಮಿಸಿದವರಿಗೆ ಸಾಮಾಜಿಕ, ಆರ್ಥಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆ ” ಎಂದು ನಿರ್ಣಯಿಸಿದೆ. ಈ ನಿರ್ಣಯದಂತೆ ನಮ್ಮ ಆಡಳಿತ ಈ ಅವಧಿಯಲ್ಲಿ ನಿವೃತ್ತರಾದ ನೌಕರರ ಹಿತ ಕಾಯುವುದು ಜನಪರವಾದ, 'ನೌಕರ ಸ್ನೇಹಿ'ಯಾದ ಧರ್ಮ. ಆದರೆ ಈ ಧರ್ಮವನ್ನು ಪಾಲಿಸದೆ ನ್ಯಾಯಾಲಯದ ನಿರ್ಣಯದಂತೆ ಸಾಮಾಜಿಕ ಆರ್ಥಿಕ ನ್ಯಾಯವನ್ನು ನಿವೃತ್ತರಿಗೆ ನೀಡದೆ ಅವರನ್ನು ವಂಚಿಸಲಾಗಿದೆ.


ನೌಕರರಿಗೆ ಮದ್ಯಾಂತರ ಪರಿಹಾರ ನೀಡುವುದು ಆಯಾ ಆಡಳಿತ ಮತ್ತು ನೌಕರರ ನಡುವಿನ ಮಾನವೀಯ ಮತ್ತು ಆತ್ಮೀಯ ಬರವಸೆ ಎಂದು ನಂಬಿದ್ದೇವೆ. ಯಾವುದೇ ಆಡಳಿತ ತನ್ನ ನೌಕರರಿಗೆ ಮದ್ಯಾಂತರ ಪರಿಹಾರ ಘೋಷಿಸಿದಲ್ಲಿ ಆ ದಿನದಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ಶ್ರೇಣಿಯನ್ನು ನಿನಗೆ ನೀಡುತ್ತೇನೆ ಎಂಬ ಒಪ್ಪಂದ ಏರ್ಪಡುತ್ತದೆ. ಆದರೆ ಸರ್ಕಾರಿ ಆದೇಶ ಸಂಖ್ಯೆ FD 07 SRP 2023 ದಿನಾಂಕ:1-3-2023 ರಲ್ಲಿ ದಿನಾಂಕ:1-4-2023 ರಿಂದ ಅನ್ವಯವಾಗುವಂತೆ ಘೋಷಣೆ ಮಾಡಿದ ಮಧ್ಯಂತರ ಪರಿಹಾರ ದಿನಾಂಕವನ್ನೂ ಸಹಾ 7 ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರುವಾಗ ಪರಿಗಣಿಸದೆ 2024 ರ ಪರಿಷ್ಕೃತ ವೇತನ ಶ್ರೇಣಿಯ ಘೋಷಣೆಯನ್ನು ಅವೈಜ್ಞಾನಿಕವಾಗಿ ದಿನಾಂಕ:1-8-2024 ರಿಂದ ಜಾರಿ ಮಾಡುವ ಮೂಲಕ ನೌಕರರ ಮತ್ತು ಆಡಳಿತದ ನಡುವಿನ ಮಾನವೀಯ ಸಂಬಂಧವನ್ನು ಆಡಳಿತ ವ್ಯವಸ್ಥೆ ಮುರಿದುಕೊಂಡಿದ್ದರಿಂದ ಈ ಅವಧಿಯಲ್ಲಿ ನಿವೃತ್ತರಾದ ಸಾವಿರಾರು ನೌಕರರಿಗೆ ಅನ್ಯಾಯವಾಗುವಂತೆ ಮಾಡಿದೆ.


2024 ರ ವೇತನ ಶ್ರೇಣಿ ಜಾರಿ ಸುಮಾರು 2 ವರ್ಷಗಳಿಗೂ ಹೆಚ್ಚು ತಡವಾಗಿ ಘೋಷಣೆಯಾಗಿದೆ. ಇದಕ್ಕೆ ಕಾರಣವಾದರು ಏನು. ಈ ವಿಳಂಬಕ್ಕೆ ನಿವೃತ್ತ ನೌಕರರನ್ನು ಬಲಿಪಶು ಮಾಡುವುದು ಆಡಳಿತ ವ್ಯವಸ್ಥೆಗೆ ನ್ಯಾಯ ಅನಿಸುತ್ತದೆಯೇ. ಈ ವಿಳಂಭ ನೀತಿಯಿಂದ ಸಂಕಟ ಅನುಭವಿಸುತ್ತಿರುವ ನಿವೃತ್ತ ನೌಕರರು ಹಾಗೂ ಅವರ ಅವಲಂಬಿತರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅನಿಸುವುದಿಲ್ಲವೆ?


ಘನ ಸರ್ಕಾರದಲ್ಲಿ ನಿವೃತ್ತರಾದ ನಮ್ಮ ಮನವಿ ಏನೆಂದರೆ 1-7-2022 ರಿಂದ ದಿನಾಂಕ:31-7-2024 ರ ಅವಧಿಯಲ್ಲಿ ನಿಗದಿ ಮಾಡುವ 2024 ರ 7 ನೇ ಪರಿಷ್ಕೃತ ವೇತನ ಶ್ರೇಣಿಯ ದರದಲ್ಲೇ ಡಿ ಸಿ ಆರ್ ಜಿ. ಕಮ್ಯೂಟೇಷನ್. ಗಳಿಕೆರಜೆ ನಗದೀಕರಣಗಳನ್ನು ಪಡೆಯಲು ಆದೇಶ ಮಾಡುವ ಮೂಲಕ ಸರ್ಕಾರಕ್ಕಾಗಿ ದುಡಿದು ದಣಿದಿರುವ ನಿವೃತ್ತ ನೌಕರರ ಘನತೆಯನ್ನು ಕಾಪಾಡಬೇಕೆಂದು ಹಾಗೂ ನಿವೃತ್ತಿಯ ಕರಿನೀರ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಮತ್ತು ಕರಿಮನೆಯ ಕತ್ತಲಲ್ಲಿ ಬದುಕುತ್ತಿರುವ ನಮಗೆ ನೆಮ್ಮದಿಯ ನೆಲೆ ಕಲ್ಪಿಸುವ ಔದಾರ್ಯ ತೋರಬೇಕೆಂದು ಬಯಸುತ್ತೇವೆ.


ಶ್ರೀ ಹರೀಶ್‍ ಕಟ್ಟೇಬೆಳಗುಲಿ, ನಿವೃತ್ತ ಸರ್ಕಾರಿ ಅಧಿಕಾರಿ

Ads on article

Advertise in articles 1

advertising articles 2

Advertise under the article