ವಕೀಲರ ಸಂಘದ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್!
ವಕೀಲರ ಸಂಘದ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್!
ವಕೀಲರು ಪ್ರತಿಭಟನೆ ಯಾ ಮುಷ್ಕರಗಳಲ್ಲಿ ಭಾಗಿಯಾಗುವಂತಿಲ್ಲ ಎಂಬ ನಿಯಮವಿದ್ದರೂ ವಕೀಲರು ಮುಷ್ಕರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ವಿವರಣೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಎಸೋಸಿಯೇಷನ್ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆಯಡಿ ನೋಟೀಸ್ ಜಾರಿಗೊಳಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ್ ಓಕಾ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ನ್ಯಾಯಪೀಠ ಈ ನೋಟೀಸ್ ಜಾರಿಗೊಳಿಸಿದೆ.
ವಕೀಲರು ತಾವು ಪ್ರತಿನಿಧಿಸಬೇಕಿದ್ದ ಕೇಸಿನ ವಿಚಾರಣೆ ನಡೆಯುವಾಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದರಿಂದ ಆ ಕೇಸಿನ ಕಲಾಪದಲ್ಲಿ ವಕೀಲರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರತಿಕೂಲ ಆದೇಶ ಹೊರಡಿಸಿತ್ತು.
ವಕೀಲರು ಮುಷ್ಕರ ಯಾ ಪ್ರತಿಭಟನೆಯಲ್ಲಿ ಭಾಗಿಯಾಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶ ಇದ್ದರೂ ವಕೀಲರು ಮುಷ್ಕರ ನಡೆಸುವುದು ಮತ್ತು ಕಲಾಪದಿಂದ ದೂರು ಇರುವುದು ಸರಿಯಲ್ಲ. ಇಂತಹ ಬೆಳವಣಿಗೆಗಳನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ನ್ಯಾಯಪೀಠ ಖಡಕ್ ಆಗಿ ಹೇಳಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಲು ವಕೀಲರ ಸಂಘದ ಪದಾಧಿಕಾರಿಗಳಿಗೆ ಕಲಾಪದಲ್ಲಿ ಭಾಗಿಯಾಗಿ ವಿವರಿಸಲು ಸುಪ್ರೀಂ ಕೋರ್ಟ್ ಹೊರಡಿಸಿದ ಸಮನ್ಸ್‌ನಲ್ಲಿ ಹೇಳಲಾಗಿದೆ.