ನಟಿ ರಮ್ಯಾ ಮಾನಹಾನಿ ಪ್ರಕರಣ ಸುವರ್ಣ ನ್ಯೂಸ್, ವಿಶ್ವೇಶ್ವರ ಭಟ್‌ಗೆ ಸಂಕಷ್ಟ- ಪ್ರಕರಣ ರದ್ದುಪಡಿಸಲು ಸುಪ್ರೀಂ ನಕಾರ
ನಟಿ ರಮ್ಯಾ ಮಾನಹಾನಿ ಪ್ರಕರಣ ಸುವರ್ಣ ನ್ಯೂಸ್, ವಿಶ್ವೇಶ್ವರ ಭಟ್‌ಗೆ ಸಂಕಷ್ಟ- ಪ್ರಕರಣ ರದ್ದುಪಡಿಸಲು ಸುಪ್ರೀಂ ನಕಾರ
ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನಾ ಅವರ ಬಗ್ಗೆ ಅವಹೇಳನ ಮಾಡಿ ಸುದ್ದಿ ಮಾಡಿದ್ದ ಸುವರ್ಣ ನ್ಯೂಸ್ ಮತ್ತು ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಆಗಿನ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಮಾನಹಾನಿ ಪ್ರಕರಣ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನೀವು ಪ್ರಸಾರ ಮಾಡಿರುವ ಸುದ್ದಿಯಲ್ಲಿ ನಟಿ ರಮ್ಯಾ ಅವರ ವೀಡಿಯೋ ಮತ್ತು ಭಾವಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಹಾಗಾಗಿ, ದೂರನ್ನು ವಜಾ ಮಾಡಲಾಗದು. ಹಾಗಾಗಿ, ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಧನ್ಯವಾದಗಳು ಎಂದು ನ್ಯಾಯಪೀಠ ಹೇಳಿತು.
ಕಳೆದ ವರ್ಷದ ಮಾರ್ಚ್‌ನಲ್ಲಿ ಸುವರ್ಣ ನ್ಯೂಸ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಮಾನಹಾನಿ ಪ್ರಕರಣ ವಜಾ ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಶ್ವೇಶ್ವರ ಭಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2013ರ ಮೇ 31ರಂದು ಕನ್ನಡ ಸಿನಿಮಾ ನಟಿಯರು ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಹೀಗೆ ಸುದ್ದಿ ಮಾಡುವಾಗ ನಟಿ ರಮ್ಯಾ ಅವರ ವೀಡಿಯೋ ಮತ್ತು ಭಾವಚಿತ್ರಗಳನ್ನು ಪ್ರಸಾರ ಮಾಡಲಾಗಿತ್ತು.
ಸುದ್ದಿವಾಹಿನಿಯ ಈ ಪ್ರಸಾರದಿಂದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದ್ದು, ಸುದ್ದಿಯನ್ನು ಖಚಿತಪಡಿಸದೆ ಪ್ರಸಾರ ಮಾಡಲಾಗಿದೆ ಎಂದು ರಮ್ಯಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.