ಬಾಡಿಗೆ ತಾಯ್ತನ ಪ್ರಕರಣ: ವೀರ್ಯ, ಅಂಡಾಣು ದಾನಿಗೆ ಮಕ್ಕಳ ಮೇಲೆ ಹಕ್ಕು ಇಲ್ಲ- ಹೈಕೋರ್ಟ್ ಮಹತ್ವದ ಆದೇಶ
ಬಾಡಿಗೆ ತಾಯ್ತನ ಪ್ರಕರಣ: ವೀರ್ಯ, ಅಂಡಾಣು ದಾನಿಗೆ ಮಕ್ಕಳ ಮೇಲೆ ಹಕ್ಕು ಇಲ್ಲ- ಹೈಕೋರ್ಟ್ ಮಹತ್ವದ ಆದೇಶ
ವೀರ್ಯ ಅಥವಾ ಅಂಡಾಣು ದಾನಿಯು ಮಗುವಿನ ಮೇಲೆ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಮತ್ತು ತನ್ನ ವೀರ್ಯ ಅಥವಾ ಅಂಡಾಣುವಿನಿಂದ ಹುಟ್ಟಿನ ಮಗುವಿನ ಜೈವಿಕ ಪೋಷಕ ಎಂದು ಹೇಳಿಕೊಳ್ಳಲು ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್‌ನ ನ್ಯಾ.. ಮಿಲಿಂದ್ ಜಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ.
ತಾನು ಮಗುವಿನ ಜೈವಿಕ ತಂದೆ ಯಾ ತಾಯಿ ಎಂಬ ದಾವೆಯನ್ನು ಮಂಡಿಸಲು ವೀರ್ಯ ಯಾ ಅಂಡಾಣು ದಾನಿಗೆ ಕಾನೂನಾತ್ಮಕ ಅವಕಾಶ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಬಾಡಿಗೆ ತಾಯ್ತನದ ಮೂಲಕ ಜನಿಸಿದ ಅವಳಿ ಪುತ್ರಿಯರನ್ನು ತನ್ನಿಂದ ದೂರವಿಡಲಾಗಿದೆ. ತನ್ನ ಪತಿ ಹಾಗೂ ಅಂಡಾಣುದಾನಿಯಾದ ತನ್ನ ಕಿರಿಯ ಸಹೋದರಿ ಜೊತೆಗೆ ಅವರು ವಾಸ ಮಾಡುತ್ತಿದ್ದಾರೆ ಎಂದು ದೂರಿ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅವರು ಸಲ್ಲಿಸಿದ ದೂರನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಅರ್ಜಿದಾರರರ ಕಿರಿಯ ಸಹೋದರಿ ಅಂಡಾಣು ದಾನಿಯಾಗಿದ್ದರೂ, ಈ ಅವಳಿ ಮಕ್ಕಳ ಮೇಲೆ ಆಕೆಗೆ ಯಾವುದೇ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಹೇಳಿ ತನ್ನ ಐದು ವರ್ಷದ ಅವಳಿ ಪುತ್ರಿಯರನ್ನು ಭೇಟಿ ಮಾಡಲು ಅನುಮತಿ ನೀಡಿತು.
ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿ ಈ ಪರಿತ್ಯಕ್ತ ದಂಪತಿ ನಡುವೆ 2018ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಆಗ 2005ರಲ್ಲಿ ಭಾರತೀಯ ವೈದ್ಯಕೀಯ ಮಂಡಳೀಯು ಜಾರಿಗೊಳಿಸಿದ್ದ ಮಾರ್ಗದರ್ಶಿ ಸೂತ್ರಗಳು ಬಾಡಿಗೆ ತಾಯ್ತನದ ಒಪ್ಪಂದನವನ್ನು ನಿಯಂತ್ರಿಸುತ್ತಿದ್ದವು. ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ದಾನಿ ಹಾಗೂ ಬಾಡಿಗೆ ತಾಯಿಯು ಎಲ್ಲ ರೀತಿಯ ಪಾಲನಾ ಹಕ್ಕುಗಳನ್ನು ತ್ಯಜಿಸಬೇಕಾಗುತ್ತದೆ. 2021ರಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ ಜಾರಿ ಬಂದಿದೆ.
ಪ್ರಕರಣದ ವಿವರ:
ಅರ್ಜಿದಾರ ಮಹಿಳೆಯ ತಂಗಿ ಅಂಡಾಣು ದಾನಕ್ಕೆ ಸ್ವ-ಇಚ್ಚೆಯಿಂದ ಮುಂದೆ ಬಂದಿದ್ದರು. ಅದರಂತೆ 2018ರಲ್ಲಿ ಗರ್ಭ ಧರಿಸಿದ ಬಾಡಿಗೆ ತಾಯಿ ಅಂದರೆ ದಾನಿಯ ಅಕ್ಕ 2019ರಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಈ ನಡುವೆ 2019ರಲ್ಲಿ ನಡೆದ ಅಪಘಾತವೊಂದರಲ್ಲಿ ಅಂಡಾನು ದಾಣ ಮಾಡಿದ್ದ ತಂಗಿಯ ಪತಿ ಹಾಗೂ ಮಗಳು ಮೃತಪಟ್ಟರು. ಅರ್ಜಿದಾರ ಮಹಿಳೆ ಹಾಗೂ ಆಕೆಯ ಪತಿ ನಡುವೆ ಮನಸ್ತಾಪ ಉಂಟಾಗಿ ಪತಿ 2021ರ ಮಾರ್ಚ್‌ನಲ್ಲಿ ಪತ್ನಿಗೆ ಮಾಹಿತಿ ನೀಡದೆ ಮಕ್ಕಳೊಂದಿಗೆ ಇನ್ನೊಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು.
ಆ ನಂತರ, ಅಪಘಾತದಲ್ಲಿ ಪತಿ ಮತ್ತು ಮಗಳನ್ನು ಕಳೆದುಕೊಂಡಿದ್ದ ಪತ್ನಿಯ ಸಹೋದರಿಯ ಜೊತೆಗೆ ವಾಸ ಮಾಡಲು ಶುರು ಮಾಡಿದರು. ಆಗ ಮಕ್ಕಳೂ ಅವರ ಜೊತೆಗಿದ್ದರು. ಇದರಿಂದ ಅರ್ಜಿದಾರ ಮಹಿಳೆ ಒಬ್ಬಂಟಿಯಾದರು. ಹಾಗಾಗಿ, ತಂಗಿ ಮತ್ತು ಪತಿಯ ಜೊತೆಗೆ ಇರುವ ತನ್ನ ಮಕ್ಕಳ ಭೇಟಿಗೆ ಅವಕಾಶ ನೀಡುವಂತೆ ಮಹಿಳೆ ಸ್ಥಳೀಯ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.