ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಸುಪ್ರೀಂ ಕೋರ್ಟ್‌ನಿಂದಲೇ ದೂರು ದಾಖಲು
ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಸುಪ್ರೀಂ ಕೋರ್ಟ್‌ನಿಂದಲೇ ದೂರು ದಾಖಲು
ತಾನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಎಂದು ಪರಿಚಯಿಸಿಕೊಂಡ ವಂಚಕನೊಬ್ಬ 500 ರೂಪಾಯಿಗೆ ಬೇಡಿಕೆ ಇಟ್ಟ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಖಾತೆಯ ವಿರುದ್ಧ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ದೂರು ನೀಡಿದೆ.
ಸಿಜೆಐ ಚಂದ್ರಚೂಡ್ ಅವರ ಹೆಸರು ಮತ್ತು ಅವರ ಭಾವಚಿತ್ರ ಇದ್ದ ಖಾತೆಯಿಂದ ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ. ಈ ಸಾಮಾಜಿಕ ಜಾಲತಾಣದ ಸ್ಕ್ರೀನ್‌ಶಾಟ್ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಅರಿವಿಗೆ ಬರುತ್ತಿದ್ದಂತೆಯೇ ದೂರು ನೀಡಲಾಗಿದೆ.
ಹಲೋ.. ನಾನು ಸಿಜೆಐ. ಕೊಲೀಜಿಯಂ ತುರ್ತು ಸಭೆ ಹಮ್ಮಿಕೊಂಡಿದ್ದು, ನಾನು ಕನ್ನಾಟ್ ಪ್ಲೇಸ್‌ನಲ್ಲಿ ಸಿಲುಕಿಕೊಂಡಿದ್ದೇನೆ. ಕ್ಯಾಬ್‌ನಲ್ಲಿ ಪ್ರಯಾಣ ಬೆಳೆಸುವುದಕ್ಕಾಗಿ ನೀವು ನನಗೆ ರೂ. 500 ಕಳಿಸಬಹುದೇ ಎಂದು ವಂಚಕ ಬರೆದುಕೊಂಡಿದ್ದ. ನ್ಯಾಯಾಲಯಕ್ಕೆ ಮರಳಿದ ಬಳಿಕ ಹಣ ವಾಪಸ್ ಮಾಡುವುದಾಗಿ ಆತ ಭರವಸೆ ನೀಡಿದ್ದ.
ಈ ಸಂದೇಶ ಅಧಿಕೃತ ಎಂದು ನಂಬಿಸುವುದಕ್ಕಾಗಿ ತನ್ನ ಐ ಪ್ಯಾಡ್‌ನಿಂದ ಈ ಸಂದೇಶ ಕಳುಹಿಸುತ್ತಿರುವುದಾಗಿ ವಂಚಕ ಹೇಳಿಕೊಂಡಿದ್ದ. ಸಿಜೆಐ ಅವರ ದೂರನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಭದ್ರತಾ ವಿಭಾಗವು ದೆಹಲಿ ಪೊಲೀಸರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.