ಕೋರ್ಟ್ ಸಮನ್ಸ್‌ಗೆ ಫೋರ್ಜರಿ ಸಹಿ: ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಕೋರ್ಟ್ ಸಮನ್ಸ್‌ಗೆ ಫೋರ್ಜರಿ ಸಹಿ: ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ನ್ಯಾಯಾಲಯದ ಕಲಾಪಕ್ಕೆ ಹಾಜರಾಗುವಂತೆ ಕೋರಿ ಕೋರ್ಟ್ ಹೊರಡಿಸಿದ್ದ ಸಮನ್ಸ್‌ಗೆ ಪೊಲೀಸ್ ಕಾನ್ಸ್‌ಟೆಬಲ್ ಫೋರ್ಜರಿ ಸಹಿ ಹಿಂತಿರುಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಸಿಬ್ಬಂದಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಈ ಘಟನೆ ನಡೆದಿರುವುದು ಚಿಕ್ಕಮಗಳೂರಿನ ತರೀಕೆರೆ ಪ್ರಧಾನ ನ್ಯಾಯಾಲಯದಲ್ಲಿ. 2011ರಲ್ಲಿ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ.ಬಿ. ಶಶಿಧರ್ ಶಿಕ್ಷೆಗೊಳಗಾದ ಆರೋಪಿ ಪೊಲೀಸ್ ಸಿಬ್ಬಂದಿ.
2008ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2011ರಲ್ಲಿ ತರೀಕೆರೆಯ ಸಿಪಿಐಗಳಾಗಿದ್ದ ಕಾಂತರೆಡ್ಡಿ, ಧರ್ಮರಾಜ್ ಮತ್ತು ಅಜ್ಜಂಪುರದ ವೈದ್ಯರೊಬ್ಬರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಆರೋಪಿ ಕಾನ್ಸ್‌ಟೆಬಲ್ ಈ ಸಮನ್ಸ್‌ನ್ನು ಜಾರಿ ಮಾಡದೆ ತಾನೇ ಫೋರ್ಜರಿ ಸಹಿ ಮಾಡಿ ನ್ಯಾಯಾಲಯಕ್ಕೆ ಹಿಂತಿರುಗಿಸಿದ್ದರು.
ಆ ನಂತರ ಕೋರ್ಟ್ ಈ ವ್ಯಕ್ತಿಗಳ ವಿರುದ್ಧ ವಾರೆಂಟ್ ಜಾರಿಗೊಳಿಸಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಈ ಮೂವರು ನ್ಯಾಯಾಲಯಕ್ಕೆ ಹಾಜರಾಗಿ ತಮಗೆ ಸಮನ್ಸ್ ತಲುಪಿಲ್ಲ ಎಂದು ನ್ಯಾಯಾಲಯದಲ್ಲಿ ನಿವೇದಿಸಿಕೊಂಡರು.
ಸಮನ್ಸ್ ಜಾರಿಯ ಬಗ್ಗೆ ನ್ಯಾಯಾಲಯ ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸ್ ಸಿಬ್ಬಂದಿ ಶಶಿಧರ್ ತಾನೇ ಆ ಸಮನ್ಸ್‌ಗೆ ಸಹಿ ಹಾಕಿ ಹಿಂತಿರುಗಿಸಿದ್ದ ವಿಚಾರ ಬೆಳಕಿಗೆ ಬಂತು. ಆರೋಪಿ ಸಿಬ್ಬಂದಿ ವಿರುದ್ಧ ಸೆಕ್ಷನ್ 469ರ ಅಡಿ ಪ್ರಕರಣ ದಾಖಲಿಸಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ಸಂಪೂರ್ಣ ಸಾಕ್ಷಿ ವಿಚಾರಣೆ ನಡೆಸಿದ ತರೀಕೆರೆ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಎಂ.ಡಿ. ಪವಿತ್ರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.