ಹಿಜಬ್ ನಿಷೇಧಕ್ಕೆ ಸುಪ್ರೀಂ ತಡೆ: ಬಿಂದಿ, ಕುಂಕುಮ ಕೂಡಾ ನಿಷೇಧಿಸ್ತೀರಾ..? ನ್ಯಾಯಪೀಠ ಪ್ರಶ್ನೆ
ಹಿಜಬ್ ನಿಷೇಧಕ್ಕೆ ಸುಪ್ರೀಂ ತಡೆ: ಬಿಂದಿ, ಕುಂಕುಮ ಕೂಡಾ ನಿಷೇಧಿಸ್ತೀರಾ..? ನ್ಯಾಯಪೀಠ ಪ್ರಶ್ನೆ
(Representational Picture*)
ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಹಿಜಬ್, ಬುರ್ಖಾ, ಟೋಪಿ, ನಕಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈ ಕಾಲೇಜೊಂದರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ, ಎನ್. ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜನ್ನು ನಡೆಸುತ್ತಿರುವ ಚೆಂಬೂರು ಟ್ರಾಂಬೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದಾರೆ.
ತಾವು ಏನು ಧರಿಸಬೇಕು ಎಂಬುದನ್ನು ನಿರ್ಧರಿಸಲು ವಿದ್ಯಾರ್ಥಿನಿಯರಿಗೆ ಸ್ವಾತಂತ್ಯ ಇರಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಹಣೆಯ ಕುಂಕುಮ ಯಾ ಬಿಂದಿ ಧರಿಸುವುದನ್ನೂ ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದೆ.
ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವ ನೀವು, ಮಹಿಳೆಯರ ಸಬಲೀಕರಣವನ್ನು ಹೇಗೆ ಮಾಡುತ್ತೀರಿ..? ಈ ಬಗ್ಗೆ ಕಡಿಮೆ ಮಾತಾಡಿದಷ್ಟೂ ಒಳ್ಳ್ಯೆಯದು. ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ಯ ಎಲ್ಲಿದೆ..? ಏನು ಧರಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯ ವಿದ್ಯಾರ್ಥಿನಿಯರಿಗೆ ಎಲ್ಲಿದೆ..? ಇಂತಹ ವಿಷಯಗಳಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ತೀರ್ಮಾನಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು ಎಂದು ನ್ಯಾಯಪೀಠ ಹೇಳಿದೆ.
ಕಾಲೇಜು ಆಡಳಿತ ಮಂಡಳಿ ಪರ ವಾದ ಮಂಡಿಸಿದ ವಕೀಲರು, ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆಗಳು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ, ಹಿಜಬ್, ನಕಾಬ್ ಮತ್ತು ಬುರ್ಖಾ ಮಾತ್ರವಲ್ಲ, ಹರಿದ ಜೀನ್ಸ್ ಮತ್ತು ತುಂಡುಗೆಯನ್ನೂ ಸುತ್ತೋಲೆಯಲ್ಲಿ ನಮೂದಿಸಲಾಗಿದೆ ಎಂದು ವಾದಿಸಿದರು.
ಆದರೆ, ಈ ವಾದವನ್ನು ಒಪ್ಪದ ನ್ಯಾಯಪೀಠ, ವಿದ್ಯಾರ್ಥಿಗಳ ಹೆಸರುಗಳು ಅವರ ಧಾರ್ಮಿಕ ಅಸ್ಮಿತೆಯನ್ನು ಬಹಿರಂಗಪಡಿಸುವುದಿಲ್ಲವೇ..? ಹೆಸರುಗಳಲ್ಲೂ ಧರ್ಮ ಕಾಣುತ್ತದೆ. ಸ್ವಾತಂತ್ಯ ಬಂದು ಇಷ್ಟು ವರ್ಷಗಳಾದ ಮೇಲೆ ನಿಮಗೆ ದೇಶದಲ್ಲಿ ಇಷ್ಟೊಂದು ಧರ್ಮಗಳಿವೆ ಎಂದು ಗೊತ್ತಾಗಿದೆಯೇ..? ಇಂತಹ ನಿಯಮ ಹೇರುವುದನ್ನು ನಿಲ್ಲಿಸಿ.. ಎಂದು ಕಿವಿಮಾತು ಹೇಳಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಕಾಲೇಜಿಗೆ ಬರುತ್ತಾರೆ. ಈ ಸುತ್ತೋಲೆಯಿಂದ ಈಗ ಹಿಜಬ್ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ತರಗತಿಗೆ ಹಾಜರಾಗದಂತೆ ತಡೆಯಲಾಗುತ್ತದೆ ಎಂದು ಆರೋಪಿಸಿದರು..
441 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರಿಗೆ ಮಾತ್ರ ಸಮಸ್ಯೆಯಾಗುತ್ತದೆಯೇ..? ಅದನ್ನು ಧರಿಸುವಂತೆ ಕುಟುಂಬ ಸದಸ್ಯರು ಒತ್ತಾಯ ಮಾಡಿರಬಹುದು. ಎಲ್ಲರೂ ಒಟ್ಟಿಗೆ ಓದಲಿ. ಆದರೆ, ಈ ನಿಯಮಗಳನ್ನು ಜಾರಿ ಮಾಡಬೇಡಿ ಎಂದು ನ್ಯಾಯಪೀಠ ಹೇಳಿತು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಬಜ್, ಬುರ್ಖಾ ಯಾ ನಕಾಬ್‌ಗೆ ಅವಕಾಶ ನೀಡಬೇಕೇ, ಬೇಡವೇ ಎನ್ನುವ ವಿಚಾರ ಸುಪ್ರೀಂ ಕೋರ್ಟ್‌ನ ಉನ್ನತ ಪೀಠದ ಮುಂದೆ ಇತ್ಯರ್ಥಕ್ಕೆ ಬಾಕಿ ಇದೆ.