ಪ.ಜಾತಿ, ಪಂಗಡದ ಒಳ ಮೀಸಲಾತಿ; ರಾಜ್ಯಗಳಿಗೆ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ಪ.ಜಾತಿ, ಪಂಗಡದ ಒಳ ಮೀಸಲಾತಿ; ರಾಜ್ಯಗಳಿಗೆ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ನೀಡುವುದಕ್ಕೆ ರಾಜ್ಯಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಬಿ. ಆರ್. ಗವಾಯಿ, ವಿಕ್ರಮ್‌ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ಏಳು ಸದಸ್ಯರ ಸಂವಿಧಾನಿಕ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಈ ಮೂಲಕ 2005ರ್ಲಿ ಇ.ವಿ. ಚಿನ್ನಯ್ಯ Vs ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿದೆ. ಏಳು ನ್ಯಾಯಮೂರ್ತಿಗಳ ಪೈಕಿ ಬೇಲಾ ಎಂ. ತ್ರಿವೇದಿ ಒಳ ಮೀಸಲಾತಿಗೆ ಅನುಮತಿ ನೀಡಬಾರದು ಎಂದು ಭಿನ್ನ ತೀರ್ಪು ನೀಡಿದರು.
ಆದರೆ, ಉಳಿದ ನ್ಯಾಯಮೂರ್ತಿಗಳು ಬಹುಮತದ ತೀರ್ಪಿಗೆ ಅಂಕಿತ ಹಾಕಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದ ಅವರ ಪ್ರಗತಿ ಸಾಧ್ಯವಾಗುವುದಿಲ್ಲ. ಸಂವಿಧಾನದ 14ನೇ ವಿಧಿ ಒಳ ಮೀಸಲಾತಿಗೆ ಅನುಮತಿ ನೀಡುತ್ತದೆ. ವರ್ಗವೊಂದು ಏಕರೂಪವಾಗಿದೆಯೇ ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಯೋಜಿಸದ ವರ್ಗವನ್ನು ಮತ್ತಷ್ಟು ವರ್ಗೀಕರಿಸಬಹುದೇ ಎಂದು ನ್ಯಾಯಾಲಯ ಪರಿಶೀಲಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪಂಜಾಬ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಒಳ ಮೀಸಲಾತಿಗೆ ಅವಕಾಶ ಕಲ್ಪಿಸುವ ಕಾಯ್ದೆಗಳ ಸಿಂಧುತ್ವವನ್ನು ಸುಪ್ರೀಂ ನ್ಯಾಯಪೀಠ ಎತ್ತಿಹಿಡಿದಿದೆ.