ತಿಂಗಳಲ್ಲಿ ಒಂದು ದಿನ ಮಹಿಳೆಯರಿಗೆ ಮುಟ್ಟಿನ ರಜೆ: ಕೇರಳ, ಬಿಹಾರದ ಬಳಿಕ ಈಗ ಒಡಿಶಾದ ಸರದಿ
ತಿಂಗಳಲ್ಲಿ ಒಂದು ದಿನ ಮಹಿಳೆಯರಿಗೆ ಮುಟ್ಟಿನ ರಜೆ: ಕೇರಳ, ಬಿಹಾರದ ಬಳಿಕ ಈಗ ಒಡಿಶಾದ ಸರದಿ
ಎಲ್ಲ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ಒಡಿಶಾ ಸರ್ಕಾರ ಘೋಷಿಸಿದೆ.
ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಈ ಹಿಂದೆ, ಕೇರಳ ಮತ್ತು ಬಿಹಾರ ರಾಜ್ಯಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿತ್ತು. ಆ ಬಳಿಕ ಒಡಿಶಾ ಸರ್ಕಾರ ಕೂಡ ಇದೇ ಹಾದಿಯನ್ನು ಹಿಡಿದು ಮುಟ್ಟಿನ ರಜೆ ಅಧಿಕೃತಗೊಳಿಸಿದ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು.
ಮಹಿಳೆಯರು ತಮ್ಮ ಮುಟ್ಟಿನ ಮೊದಲ ಅಥವಾ ಎರಡನೇ ದಿನದಂದು ರಜೆಯನ್ನು ಪಡೆದುಕೊಳ್ಳಬಹುದು. ಮತ್ತು ಈ ರಜೆ ಸಂಪೂರ್ಣ ಐಚ್ಚಿಕವಾಗಿದೆ. ರಜೆಯನ್ನು ತೆಗೆದುಕೊಳ್ಳದೆಯೂ ಇರಬಹುದು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಉದ್ದೇಶ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಹೇಳಿದ್ದಾರೆ.
ಎಲ್ಲ ಕೆಲಸದ ಸ್ಥಳಗಳಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಬೇಕು ಎಂಬ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.