ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಿದ ಕೇಂದ್ರ: ಯೋಜನೆಯ ಪ್ರಯೋಜನಗಳೇನು..?
ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಿದ ಕೇಂದ್ರ: ಯೋಜನೆಯ ಪ್ರಯೋಜನಗಳೇನು..?
ಮಹತ್ವದ ನಿರ್ಧಾರವೊಂದರಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ(UPS)ನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಅನುಮೋದನೆ ನೀಡಿದೆ. ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಯ ಮಧ್ಯೆಯೇ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.
ಏಕೀಕೃತ ಪಿಂಚಣಿ ಯೋಜನೆ(UPS)ಯು ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಟ ಪಿಂಚಣಿ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯು 23 ಲಕ್ಷದಷ್ಟಿರುವ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಈ ಯೋಜನೆ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ನಿವೃತ್ತಿ ಕೊನೆಯ 12 ತಿಂಗಳಿನಲ್ಲಿ ಪಡೆದ ಮೂಲ ವೇತನದ ಮೂಲ ವೇತನದ ಶೇಕಡಾ 50ರಷ್ಟು ಹಣ ಪ್ರತಿ ತಿಂಗಳು ಪಿಂಚಣಿಯಾಗಿ ಖಾತೆಗೆ ಜಮೆ ಆಗಲಿದೆ.
ಎಲ್ಲ ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಜಾರಿಗೊಳಿಸಿದರೆ 90 ಲಕ್ಷ ಮಂದಿ ಸರ್ಕಾರಿ ನೌಕರರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಭವ್ ಹೇಳಿದ್ದಾರೆ.
ಯೋಜನೆಯ ಬಗ್ಗೆ ವಿವರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆ ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಈ ಯೋಜನೆ ಸರ್ಕಾರಿ ನೌಕರರಿಗೆ ಘನತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಸರ್ಕಾರಿ ಉದ್ಯೋಗಿಗಳ ಯೋಗಕ್ಷೇಮ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಸರ್ಕಾರದ ಹೊಸ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಏಕೀಕೃತ ಪಿಂಚಣಿ ಯೋಜನೆ(UPS)ನಿಂದ ಪೂರ್ಣಪ್ರಮಾಣದ ಪಿಂಚಣಿ ಸಿಗುವುದಿಲ್ಲ.ಶೇ. 50ರಷ್ಟು ಮಾತ್ರ ಪರಿಹಾರ ಸಿಗುತ್ತದೆ. ಹೊಸ ಯೋಜನೆಯನ್ನು ಬಿಟ್ಟು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಮತ್ತು ಈ ಹೊಸ ಯೋಜನೆಯ ವಿರುದ್ಧ ಸರ್ಕಾರಿ ನೌಕರರು ಹೋರಾಟ ನಡೆಸಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಚರಿ ಘೋಷಿಸಿದ್ದಾರೆ.