-->
ಸೆಟ್ಲ್‌ಮೆಂಟ್ ಆಧಾರದಲ್ಲಿ ಪೋಕ್ಸೊ ಪ್ರಕರಣ ರದ್ದಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸೆಟ್ಲ್‌ಮೆಂಟ್ ಆಧಾರದಲ್ಲಿ ಪೋಕ್ಸೊ ಪ್ರಕರಣ ರದ್ದಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸೆಟ್ಲ್‌ಮೆಂಟ್ ಆಧಾರದಲ್ಲಿ ಪೋಕ್ಸೊ ಪ್ರಕರಣ ರದ್ದಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಆರೋಪಿ ಮತ್ತು ಸಂತ್ರಸ್ತರ ಮಧ್ಯೆ ಸೆಟಲ್‌ಮೆಂಟ್ ಆಗಿದೆ ಎನ್ನುವ ಕಾರಣಕ್ಕೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೋ) ಅಡಿಯಲ್ಲಿ ದಾಖಲಿಸಿದ ಪ್ರಕರಣಗಳನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ್ ಓಕ ಹಾಗೂ ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದ್ದು, ಆರೋಪಿ ಪರ ಕೊಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ರದ್ದುಪಡಿಸಿದೆ.


14 ವರ್ಷದ ಬಾಲಕಿ ಮೇಲೆ 25 ವರ್ಷ ವಯಸ್ಸಿನ ವ್ಯಕ್ತಿ ಅತ್ಯಾಚಾರ ನಡೆಸಿದ್ದ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಈ ಶಿಕ್ಷೆಯನ್ನು ಕೊಲ್ಕತ್ತಾ ಹೈಕೋರ್ಟ್ ರದ್ದುಪಡಿಸಿತ್ತು.


ನ್ಯಾಯಾಲಯಗಳು ಕಾನೂನು ಪ್ರಕಾರ ನ್ಯಾಯದಾನ ಮಾಡಬೇಕೆ ವಿನಃ ಕಾನೂನಿಗೆ ವಿರುದ್ಧವಾಗಿ ವರ್ತಿಸಬಾರದು. ಪ್ರಸ್ತತ ಪ್ರಕರಣದಲ್ಲಿ ಆರೋಪಿ 25 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದಾನೆ. ಸಂತ್ರಸ್ತೆ 14 ವರ್ಷದ ಬಾಲಕಿ. ತೀರ್ಪು ನೀಡುವ ವೇಳೆ, ಈ ವಿಚಾರವನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.


ಆರೋಪಿ ಮತ್ತು ಸಂತ್ರಸ್ತೆಗೆ ಮಗು ಜನಿಸಿದೆ ಮತ್ತು ಆಕೆ ಆತನ ಜೊತೆಗೆ ವಾಸವಾಗಿದ್ದಾಳೆ ಎಂಬ ಕಾರಣಕ್ಕೆ ಹೈಕೋರ್ಟ್‌ ಪ್ರಕರಣವನ್ನು ರದ್ದುಪಡಿಸಿರುವ ಕ್ರಮ ಕಾನೂನುಬದ್ಧವಲ್ಲ ಎಂದು ನ್ಯಾಯಪೀಠ ಹೊರಡಿಸಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.


16 ವರ್ಷ ಮೇಲ್ಪಟ್ಟವರ ನಡುವಿನ ಶೋಷಣೆಯಲ್ಲದ ಮತ್ತು ಸಮ್ಮತಿಯ ಲೈಂಗಿಕತೆಯನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ಇತರ ವೇದಿಕೆಗಳಲ್ಲಿ ಚರ್ಚೆ ಮಾಡಬಹುದಾದ ವಿಷಯ. ಆದರೆ, ಈ ವಿಚಾರವನ್ನು ಪರಾಮರ್ಶಿಸುವುದು ನ್ಯಾಯಾಲಯದ ಕೆಲಸವಲ್ಲ. ಕಾನೂನಿನಲ್ಲಿ ಹೇಳಿರುವುದನ್ನು ನ್ಯಾಯಾಲಯಗಳು ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಇದೇ ವೇಳೆ, ಹದಿಹರೆಯದ ಯುವತಿಯರು ತಮ್ಮ ಲೈಂಗಿಕ ಆಸೆಗಳನ್ನು ಹತ್ತಿಕ್ಕಬೇಕು ಎಂಬ ಕೊಲ್ಕತ್ತಾ ಹೈಕೋರ್ಟ್ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ತೀರ್ಪು ಬದಿಗೆ ಸರಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದರೂ ಅದು ಪರಿಗಣನಾರ್ಹವಲ್ಲ ಎಂದು ಕಾನೂನು ಸ್ಪಷ್ಟಪಡಿಸಿದೆ. ಹಾಗಿದ್ದೂ ಇಂತಹ ಕೃತ್ಯವನ್ನು ಶೋಷಣೆಯಲ್ಲದ ಪ್ರಣಯ ಸಂಬಂಧ ಎಂದು ಪರಿಗಣಿಸುವುದಾದರೂ ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.


ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ. 14 ವರ್ಷದ ಬಾಲಕಿಯ ಮೇಲೆ 25 ವರ್ಷ ವಯಸ್ಸಿನ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದನ್ನು ಶೋಷಣೆಯಲ್ಲದ ಲೈಂಗಿಕತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article