ಡಿಜಿಟಲ್ ಪೋಡಿ ದುರಸ್ತಿ ಅಭಿಯಾನ: ಕಂದಾಯ ಇಲಾಖೆಯಿಂದ ಅಭಿಯಾನ
ಡಿಜಿಟಲ್ ಪೋಡಿ ದುರಸ್ತಿ ಅಭಿಯಾನ: ಕಂದಾಯ ಇಲಾಖೆಯಿಂದ ಅಭಿಯಾನ
ರಾಜ್ಯಾದ್ಯಂತ ಡಿಜಿಟಲ್ ಪೋಡಿ ದುರಸ್ತಿ ಅಭಿಯಾನವನ್ನು ಕಂದಾಯ ಇಲಾಖೆ ನಡೆಸುತ್ತಿದೆ. ಈ ಅಭಿಯಾನದ ಪ್ರಯೋಜನ ಪಡೆದು ರೈತರು ತಮ್ಮ ಜಮೀನಿನ ಪೋಡಿ ದುರಸ್ತಿ ಮಾಡಿಕೊಳ್ಳಲು ಕಂದಾಯ ಇಲಾಖೆ ಮನವಿ ಮಾಡಿದೆ.
ದಶಕಗಳಿಂದ ಖಾಲಿ ಉಳಿದಿರುವ ಜಮೀನುಗಳ 1-5 ನಮೂನೆ ಪೋಡಿ ದುರಸ್ತಿ ಕಾರ್ಯ ಬಾಕಿ ಉಳಿದಿದ್ದು, ಈ ಕಾರ್ಯವನ್ನು ಯುದ್ದೋಪಾದಿಯಲ್ಲಿ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ದಶಕಗಳ ಹಿಂದೆ ಮಂಜೂರಾಗಿದ್ದ ಸರ್ಕಾರಿ ಜಮೀನು ಸಹ, ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿದೆ.
ಈ ಹಿಂದೆ, ಪೋಡಿ ದುರಸ್ತಿ ಮಾಡಲು ಅಗತ್ಯ ಇರುವ 1-5 ನಮೂನೆಗಳನ್ನುತಯಾರಿಸಲು ಕಾಗದದ ಕಡತಗಳನ್ನು ಬಳಸಲಾಗುತ್ತಿತ್ತು. ಆದರೂ ಈ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹಲವು ಜಿಲ್ಲೆಗಳಲ್ಲಿ ಕಡತಗಳೇ ಕಣ್ಮರೆಯಾಗಿವೆ.
ಈಗ ಡಿಜಿಟಲ್ App ಮೂಲಕ ಪೋಡಿ ದುರಸ್ತಿಗೆ ವೇದಿಕೆ ಸಿದ್ದವಾಗಿದ್ದು, ಕಂದಾಯ ಇಲಾಖೆ ಅತಿ ಶೀಘ್ರವಾಗಿ ಕಡತಗಳನ್ನು ತಯಾರಿಸುತ್ತಿದೆ.
ಈ ಡಿಜಿಟಲ್ App ಮೂಲಕ ಯಾವ ಕಡತ ಯಾವ ಅಧಿಕಾರಿಯ ಬಳಿ ಎಷ್ಟು ದಿನದಿಂದ ಬಾಕಿ ಉಳಿದಿದೆ ಎಂಬ ಮಾಹಿತಿ ಸಿಗುತ್ತದೆ. ಈ ಮೂಲಕ ಅಧಿಕಾರಿಗಳು ರೈತರಿಗೆ ಅನಗತ್ಯ ಕಿರುಕುಳ ನೀಡಿದರೆ ಪತ್ತೆಹಚ್ಚಬಹುದು. ಪೋಡಿ ದುರಸ್ತಿಯ ಮೇಲುಸ್ತುವಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಲಿದ್ದು, ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.
ಒಬ್ಬ ರೈತನಿಗೆ ಸಿದ್ಧಪಡಿಸಿದ 1-5 ನಮೂನೆ ಕಡತ, ಈ ಸರ್ವೇ ನಂಬರಿನ ಎಲ್ಲ ರೈತರಿಗೂ ಅನುಕೂಲವಾಗುತ್ತದೆ. ರೈತರ ಅರ್ಜಿಗೆ ಕಾಯದೆ ಇಲಾಖೆ ಸ್ವಯಂ ಕಡತಗಳನ್ನು ತಯಾರಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇದೇ ವೇಳೆ, ಪೋಡಿ ದುರಸ್ತಿ ಇಲ್ಲದೆ ತೊಂದರೆ ಅನುಭವಿಸುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.