ವಕೀಲರ ಪರಿಷತ್ತುಗಳು ವಕೀಲರ ನೋಂದಣಿಗೆ ನಿಗದಿಗಿಂತ ಹೆಚ್ಚು ಹಣ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್
ವಕೀಲರ ಪರಿಷತ್ತುಗಳು ವಕೀಲರ ನೋಂದಣಿಗೆ ನಿಗದಿಗಿಂತ ಹೆಚ್ಚು ಹಣ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್
ಕಾನೂನು ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳುವಾಗ ವಕೀಲರ ಪರಿಷತ್ತುಗಳು ವಕೀಲರ ಕಾಯ್ದೆಯ ಸೆಕ್ಷನ್ 24ರಲ್ಲಿ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ. ಪರ್ದಿವಾಲಾ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ವಕೀಲರ ಪರಿಷತ್ತುಗಳು ಕಾನೂನು ಪದವೀಧರರನ್ನು ತಮ್ಮ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳುವಾಗ 15 ಸಾವಿರದಿಂದ 42 ಸಾವಿರದ ವರೆಗೆ ಶುಲ್ಕ ವಿಧಿಸುತ್ತಿವೆ. ಆದರೆ, ವಕೀಲರ ಕಾಯ್ದೆಯ ಸೆಕ್ಷನ್ 24(1)(f)ರ ಪ್ರಕಾರ ವಕೀಲರ ನೋಂದಣಿ ಶುಲ್ಕವನ್ನು ವಿಧಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ವಕೀಲರ ನೋಂದಣಿ ಶುಲ್ಕ ಎಷ್ಟು ಗೊತ್ತೇ..?
ಸಾಮಾನ್ಯ ವರ್ಗಕ್ಕೆ ಸೇರಿದ ವಕೀಲರಿಗೆ: ರೂ. 750/-
ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ ವಕೀಲರಿಗೆ: ರೂ. 125/-
ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ದೇಶದ ಸಂಸತ್ತು ಈ ಶುಲ್ಕವನ್ನು ನಿಗದಿಪಡಿಸಿದೆ. ಅದನ್ನು ಬದಲಿಸಿ ಯಾವುದೇ ವಕೀಲರ ಪರಿಷತ್ತು ಹೆಚ್ಚಿನ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈ ತೀರ್ಪು ಉತ್ತರಾನ್ವಯವಾಗಲಿದ್ದು, ಈಗಾಗಲೇ ಹೆಚ್ಚಿನ ಶುಲ್ಕವನ್ನು ಪಡೆದಿರುವ ವಕೀಲರ ಪರಿಷತ್ತುಗಳು ತನ್ನ ಸದಸ್ಯರಿಗೆ ಹೆಚ್ಚುವರಿ ಹಣವನ್ನು ಮರು ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ವಕೀಲರ ಪರಿಷತ್ತುಗಳು ತನ್ನ ಸದಸ್ಯ ವಕೀಲರಿಗೆ ನೀಡುವ ಸೇವೆಗೆ ಪೂರಕವಾಗಿ ಅಗತ್ಯ ಶುಲ್ಕವನ್ನು ಪಡೆಯಲು ಸ್ವಾತಂತ್ಯ ಹೊಂದಿವೆ. ಆದರೆ, ಅದನ್ನು ನೋಂದಣಿ ಶುಲ್ಕವನ್ನಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣ: ಗೌರವ್ ಕುಮಾರ್ Vs ಭಾರತ ಸರ್ಕಾರ
ಸುಪ್ರೀಂ ಕೋರ್ಟ್, WP (C) 352/2023 Dated 30-07-2024