ಸಿಂಗಲ್ ಸೈಟ್ ಅನುಮೋದನೆ: ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ಕೊಟ್ಟೇ ಸ್ವಾಧೀನ ಮಾಡಿ- ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಸಿಂಗಲ್ ಸೈಟ್ ಅನುಮೋದನೆ: ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ಕೊಟ್ಟೇ ಸ್ವಾಧೀನ ಮಾಡಿ- ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಏಕ ನಿವೇಶನವನ್ನು ಮಂಜೂರು ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರ ಯಾ ಇಲಾಖೆಗಳು ರಸ್ತೆ ವಿಸ್ತರಣೆಗೆ ಉಚಿತವಾಗಿ ಜಮೀನು ಕೊಡಬೇಕು ಎಂದು ಆದೇಶ ನೀಡುವುದು ಸಮರ್ಪಕವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ರಸ್ತೆ ವಿಸ್ತರಣೆಗಾಗಿ ನಿಗದಿಪಡಿಸಿದ ಜಮೀನನ್ನು ಸೂಕ್ತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಬೇಕು ಎಂದು ನಗರ ಯೋಜನೆ ಇಲಾಖೆ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಹೈಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಿವಾಸಿ ಅರ್ಜಿದಾರ ಅಜಿತ್ ಕುಮಾರ್ ಶೆಟ್ಟಿ ಮತ್ತು ಅವರ ಪುತ್ರ ಕಾಮರಾಜ್ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿ, ಉಡುಪಿ ನಗರ ಯೋಜನೆ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಹೈಕೋರ್ಟ್ ಮಟ್ಟಿಲೇರಿದ್ದರು.
ರಸ್ತೆ ವಿಸ್ತರಣೆಗೆ ಜಮೀನು ಪಡೆದುಕೊಳ್ಳುವ ಕುರಿತು ಹೊರಡಿಸಿದ ಆದೇಶದ ವಿರುದ್ಧ ಅರ್ಜಿದಾರರು ಆಕ್ಷೇಪವನ್ನು ಮಾಡಿದ್ದರು.
ಡಾ. ಅರುಣ್ ಕುಮಾರ್ ಬಿ.ಸಿ. Vs ಕರ್ನಾಟಕ ಸರ್ಕಾರ (WP 9408/2020) ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಏಕಪಕ್ಷೀಯವಾಗಿ ಜಮೀನಿನ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನದ ಆರ್ಟಿಕಲ್ 300A ಅಡಿ ಸಮ್ಮತವಲ್ಲ. ರಸ್ತೆ ವಿಸ್ತರಣೆ ಆಗಬೇಕಿದ್ದರೆ ಅದಕ್ಕೆ ಪ್ರತಿವಾದಿಗಳು (ಸರ್ಕಾರ) ಸೂಕ್ತ ಪ್ರಕ್ರಿಯೆ ನಡೆಸಿ ಪರಿಹಾರ ನೀಡಿದ ನಂತರವೇ ಜಮೀನು ಪಡೆದುಕೊಳ್ಳಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಪ್ರಕರಣ: ಅಜಿತ್ ಕುಮಾರ್ ಶೆಟ್ಟಿ ಮತ್ತೊಬ್ಬರು Vs ಕರ್ನಾಟಕ ಸರ್ಕಾರ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 25205/2023 Dated 02-08-2024