ತ್ರಿವಳಿ ತಲಾಖ್ ಒಂದು ಕ್ರಿಮಿನಲ್ ಅಪರಾಧ: ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಮೂಲಕ ಕೇಂದ್ರ ಸರ್ಕಾರದ ಸಮರ್ಥನೆ
ತ್ರಿವಳಿ ತಲಾಖ್ ಒಂದು ಕ್ರಿಮಿನಲ್ ಅಪರಾಧ: ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಮೂಲಕ ಕೇಂದ್ರ ಸರ್ಕಾರದ ಸಮರ್ಥನೆ
ಮುಸ್ಲಿಂ ಮಹಿಳೆಗೆ ಆಕೆಯ ಪತಿ ಮೂರು ಬಾರಿ ತಲಾಖ್ ಹೇಳಿ ವಿಚ್ಚೇದನ ನೀಡುವ ಪದ್ಧತಿ "ತ್ರಿವಳಿ ತಲಾಖ್" ಒಂದು ಕ್ರಿಮಿನಲ್ ಅಪರಾಧ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸಮರ್ಥನೆ ಮಾಡಿಕೊಂಡಿದೆ.
2019ರಲ್ಲಿ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4ರಲ್ಲಿ ತ್ರಿವಳಿ ತಲಾಖ್‌ನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019ರ ಸೆಕ್ಷನ್ 4ರ ಪ್ರಕಾರ ತ್ರಿವಳಿ ಕಾಯ್ದೆ ಅಪರಾಧಿಕ ಕೃತ್ಯ ಎಂದು ಹೇಳಲಾಗಿದೆ. ಈ ಕಾಯ್ದೆಯು ಮುಸ್ಲಿಮರ ಹಕ್ಕುಗಳ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದು, ಈ ಕಾಯ್ದೆಯನ್ನು ಅಸಂವಿಧಾನಿಕವೆಂದು ಘೋಷಿಸಬೇಕು ಎಂದು ಕೋರಿ ಜಮೈತ್ ಉಲಾಮಾ ಏ ಹಿಂದ್ ಹಾಗೂ ಸಮಸ್ತ ಕೇರಳ ಜಮೈತುಲ್ ಉಲೇಮಾ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಈ ಪ್ರಕರಣದಲ್ಲಿ ಅಫಿಡವಿಟ್ ಮೂಲಕ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, 2019ರ ಕಾಯ್ದೆಯು ಮುಸ್ಲಿಮ್ ಮಹಿಳೆಯರ ನ್ಯಾಯ ಮತ್ತು ಸಮಾನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಘೋಷಿಸಿ ರದ್ದುಪಡಿಸಿದೆ. ಈ ನಂತರವೂ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಕೆಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ವಿವರಿಸಿದೆ.