ಅಂಗೀಕೃತ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅಂಗೀಕೃತ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಕ್ಷಮ ಪ್ರಾಧಿಕಾರದಿಂದ ಒಮ್ಮೆ ಅಂಗೀಕರಿಸಲ್ಪಟ್ಟ ರಾಜೀನಾಮೆಯನ್ನು ಹಿಂಪಡೆಯಲು ಉದ್ಯೋಗಿಗೆ ಅವಕಾಶವಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಕ್ಷಮ ಪ್ರಾಧಿಕಾರವು ಒಮ್ಮೆ ಅಂಗೀಕರಿಸಿದ ನಂತರ ತನ್ನ ರಾಜೀನಾಮೆಯನ್ನು ಹಿಂಪಡೆಯಲು ಸಾರ್ವಜನಿಕ ಸೇವಕನಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಪಿ. ನರಸಿಂಹ ಮತ್ತು ಶ್ರೀ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ದಿನಾಂಕ 25.4.2024ರಂದು"ಶ್ರೀರಾಮ ಮನೋಹರ ಬಂಡೆ Vs ಉತ್ಕ್ರಾಂತಿ ಮಂಡಲ ಮತ್ತಿತರರು" ಪ್ರಕರಣದಲ್ಲಿ ಈ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ ಹೀಗಿದೆ
ಮೇಲ್ಮನವಿದಾರ ಶ್ರೀ ರಾಮ ಮನೋಹರ ಬಂಡೆ ಇವರು ವಸಂತ ರಾವ್ ನಾಯಕ್ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದು ದಿನಾಂಕ 10.10.2017 ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಸದರಿ ರಾಜೀನಾಮೆಯನ್ನು ಸಕ್ಷಮ ಪ್ರಾಧಿಕಾರವಾದ ಶಾಲಾ ಆಡಳಿತ ಮಂಡಳಿಯ ಸಭೆಯು ದಿನಾಂಕ 13.10.2017ರಂದು ತೆಗೆದುಕೊಂಡ ನಿರ್ಣಯದಲ್ಲಿ ಅಂಗೀಕರಿಸಿದ್ದು ದಿನಾಂಕ 14.10.2017 ರಂದು ಶಾಲಾ ಸಮಿತಿ ಸದರಿ ನಿರ್ಣಯದ ಅನ್ವಯ ಮೇಲ್ಮನವಿದಾರರ ರಾಜೀನಾಮೆಯನ್ನು ಸ್ವೀಕರಿಸಿತು.
ದಿನಾಂಕ 25.10.2017 ರಂದು ಮೇಲ್ಮನವಿದಾರರು ಶಿಕ್ಷಕ ಹುದ್ದೆಗೆ ತಾನು ನೀಡಿದ ರಾಜೀನಾಮೆಯನ್ನು ಹಿಂತೆಗೆದುಕೊಂಡ ಬಗ್ಗೆ ಪತ್ರವನ್ನು ಸಿದ್ಧಪಡಿಸಿ ದಿನಾಂಕ 3.11.2017 ರಂದು ಸದರಿ ಪತ್ರವನ್ನು ಅಂಚೆ ಮೂಲಕ ಶಾಲೆಗೆ ರವಾನಿಸಿದರು.
ದಿನಾಂಕ 23.11.2017 ರಂದು ಮೇಲ್ಮನವಿದಾರರು ಕರ್ತವ್ಯಕ್ಕೆ ಹಾಜರಾಗಲು ಶಾಲೆಗೆ ಆಗಮಿಸಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಲು ಮುಂದಾದರು. ಆದರೆ ಶಾಲಾ ಮುಖ್ಯೋಪಾಧ್ಯಾಯರು ಸಹಿ ಮಾಡಲು ಅವಕಾಶ ನೀಡಲಿಲ್ಲ. ತನ್ನ ರಾಜೀನಾಮೆ ಅಂಗೀಕರಿಸಿ ತನ್ನನ್ನು ಸೇವೆಯಿಂದ ಬಿಡುಗಡೆ ಗೊಳಿಸಿದ ಬಗ್ಗೆ ದಿನಾಂಕ 27.11.2017ರಂದು ಮೇಲ್ಮನವಿದಾರರು ಶಾಲೆಯಿಂದ ಪತ್ರವನ್ನು ಸ್ವೀಕರಿಸಿದರು.
ಸದರಿ ಪತ್ರದಿಂದ ಬಾಧಿತರಾದ ಮೇಲ್ಮನವಿದಾರರು ಮಹಾರಾಷ್ಟ್ರ ನೌಕರರ ಖಾಸಗಿ ಶಾಲೆಗಳ ಸೇವಾ ಶರತ್ತುಗಳ ನಿಯಂತ್ರಣ ಕಾಯ್ದೆ 1977 (MEPS) ಮತ್ತು ನಿಯಮಗಳಡಿ ಸ್ಥಾಪಿಸಲಾದ ನ್ಯಾಯ ಮಂಡಳಿಯ ಸಮಕ್ಷಮ ಆಡಳಿತ ಮಂಡಳಿ ಹಾಗೂ ಶಾಲಾ ಸಮಿತಿಯನ್ನು ಪ್ರತಿವಾದಿ/ ಪ್ರತ್ಯರ್ಜಿದಾರರುಗಳನ್ನಾಗಿಸಿ ಮೇಲ್ಮನವಿ ಸಲ್ಲಿಸಿದರು. ನ್ಯಾಯ ಮಂಡಳಿಯ ಸಮಕ್ಷಮ ಮೇಲ್ಮನವಿದಾರರು ಮಂಡಿಸಿದ ವಾದ ಈ ಕೆಳಗಿನಂತಿದೆ.
MEPS ಕಾಯಿದೆಯ ಸೆಕ್ಷನ್ 9 ರಡಿಯಲ್ಲಿ ತನ್ನನ್ನು ಸೇವೆಯಿಂದ ಬಿಡುಗಡೆಗೊಳಿಸಿ ಪ್ರತಿವಾದಿಗಳು ನೀಡಿದ ಆದೇಶ ಕಾನೂನುಬಾಹಿರವಾಗಿದೆ. ಸದರಿ ಆದೇಶಕ್ಕೆ ಸಂಬಂಧಿಸಿದ ದಾಖಲೆಗಳು ಪ್ರತಿವಾದಿಗಳು ನಂತರ ಚಿಂತಿಸಿ ಸೃಷ್ಟಿಸಿದ ದಾಖಲೆಗಳಾಗಿವೆ. ಮೇಲ್ಮನವಿದಾರರು ತಾನು ನೀಡಿದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಅವರನ್ನು ಕರ್ತವ್ಯಕ್ಕೆ ಹಾಜರಾಗುವುದರಿಂದ ತಡೆಯಲು ಪ್ರತ್ಯರ್ಜಿದಾರ ಬಳಿ ಯಾವುದೇ ಕಾರಣ ಇಲ್ಲ. ತನ್ನ ರಾಜೀನಾಮೆ ಅಂಗೀಕೃತವಾದ ಬಗ್ಗೆ ಮೇಲ್ಮನವಿದಾರರು ಪ್ರತ್ಯರ್ಜಿದಾರರಿಂದ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸಿಲ್ಲ. ಆದುದರಿಂದ ಸೇವೆಯಿಂದ ಬಿಡುಗಡೆಗೊಳಿಸಿದ ಆದೇಶವನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.
ಪ್ರತ್ಯರ್ಜಿದಾರರು ತಮ್ಮ ಲಿಖಿತ ಹೇಳಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯು ರಾಜೀನಾಮೆಯನ್ನು ಅಂಗೀಕರಿಸುವ ನಿರ್ಣಯವನ್ನು ಕೈಗೊಂಡಿದೆ. ಸದರಿ ನಿರ್ಣಯದನ್ವಯ ಶಾಲಾ ಸಮಿತಿಯು ರಾಜೀನಾಮೆಯನ್ನು ಅಂಗೀಕರಿಸಿದೆ. ರಾಜೀನಾಮೆ ಅಂಗೀಕೃತವಾದ ವಿಷಯವನ್ನು ಮೇಲ್ಮನವಿದಾರರ ಅವಗಾಹನೆಗೆ ತರಲಾಗಿದೆ. ಆದುದರಿಂದ ಮೇಲ್ಮನವಿದಾರರ ಮನವಿಯನ್ನು ತಿರಸ್ಕರಿಸಬೇಕಾಗಿ ಪ್ರಾರ್ಥಿಸಿದರು.
ಉಭಯ ಪಕ್ಷಕಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವರು ಮಂಡಿಸಿದ ವಾದ ಆಲಿಸಿದ ನ್ಯಾಯ ಮಂಡಳಿಯು ಮೇಲ್ಮನವಿದಾರರು ತನ್ನ ರಾಜೀನಾಮೆಯನ್ನು ಕಾನೂನು ಬದ್ಧವಾಗಿ ಹಿಂತೆಗೆದುಕೊಂಡಿದ್ದಾರೆ. ರಾಜೀನಾಮೆಯನ್ನು ಅಂಗೀಕರಿಸಿದ ಆಡಳಿತ ಮಂಡಳಿಯ ನಿರ್ಣಯಗಳು ನಂತರದ ಚಿಂತನೆಗಳಾಗಿವೆ ಎಂಬ ನಿಷ್ಕರ್ಷೆಗೆ ಬಂದು ದಿನಾಂಕ 25.1.2019 ರಂದು ತೀರ್ಪು ಘೋಷಿಸಿ ಮೇಲ್ಮನವಿದಾರರನ್ನು ಸೇವೆಗೆ ಮರು ನಿಯುಕ್ತಿಗೊಳಿಸುವಂತೆ ಹಾಗೂ ಸೇವೆಯಿಂದ ಬಿಡುಗಡೆಗೊಳಿಸಿದ ದಿನಾಂಕದಿಂದ 50% ವೇತನ ನೀಡುವಂತೆ ಪ್ರತ್ಯರ್ಜಿದಾರರಿಗೆ ಆದೇಶಿಸಿತು.
ನ್ಯಾಯ ಮಂಡಳಿಯ ಆದೇಶದಿಂದ ಬಾಧಿತರಾದ ಶಾಲಾ ಆಡಳಿತ ಮಂಡಳಿಯು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ 1976 /2019 ನ್ನು ದಾಖಲಿಸಿತು. ಶಾಲಾ ಆಡಳಿತ ಮಂಡಳಿಯ ಸಭೆಯು ದಿನಾಂಕ 13.10.2017 ರಂದು ಕೈಗೊಂಡ ನಿರ್ಣಯದ ಪ್ರಕಾರ ಮೇಲ್ಮನವಿದಾರರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಮಂಡಳಿಯ ಸಮಕ್ಷಮ ನಡೆದ ವಿಚಾರಣೆಯಲ್ಲಿ ಹಾಜರುಪಡಿಸಲಾಗಿದೆ. ರಾಜೀನಾಮೆ ಯು ಅಂಗೀಕೃತವಾದ ಸಂಗತಿಯನ್ನು ಮೇಲ್ಮನವಿದಾರರಿಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಯ ಸಭೆಯು ಕೈಗೊಂಡ ನಿರ್ಣಯ ಅನೂರ್ಜಿತವಾಗುವುದಿಲ್ಲ. ಶಾಲಾ ಆಡಳಿತ ಮಂಡಳಿಯು ಯಾವುದೇ ದಾಖಲೆಗಳನ್ನು ಸೃಷ್ಟಿಸಿಲ್ಲ. ಆದುದರಿಂದ ನ್ಯಾಯಮಂಡಳಿಯ ತೀರ್ಪನ್ನು ರದ್ದುಪಡಿಸಬೇಕೆಂದು ಪ್ರಾರ್ಥಿಸಲಾಯಿತು.
ಉಭಯ ಪಕ್ಷಕಾರದ ವಾದವನ್ನು ಆಲಿಸಿದ ಬಾಂಬೆ ಹೈಕೋರ್ಟ್ ನ್ಯಾಯ ಮಂಡಳಿಯು ನೀಡಿದ ತೀರ್ಪಿನಲ್ಲಿ ಪರಿಗಣಿಸಿದ ಅಂಶಗಳು ಸಮರ್ಥನೀಯವಲ್ಲ ಎಂಬ ನಿಷ್ಕರ್ಷೆಗೆ ಬಂದು ದಿನಾಂಕ 2.5.2022 ರಂದು ತೀರ್ಪು ಘೋಷಿಸಿ ನ್ಯಾಯ ಮಂಡಳಿಯ ದಿನಾಂಕ 25.1.2019 ರ ಆದೇಶವನ್ನು ರದ್ದು ಪಡಿಸಿತು.
ಬಾಂಬೆ ಹೈಕೋರ್ಟಿನ ಆದೇಶದಿಂದ ಬಾಧಿತರಾದ ಮೇಲ್ಮನವಿದಾರ ಶ್ರೀರಾಮ ಮನೋಹರ ಬಂಡೆಯವರು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಿವಿಲ್ ಮೇಲ್ಮನವಿ ಸಂಖ್ಯೆ 2014/ 2022 ಅನ್ನು ದಾಖಲಿಸಿದರು. ಉಭಯ ಪಕ್ಷಕಾರರು ನ್ಯಾಯಮಂಡಳಿಯ ಸಮಕ್ಷಮ ಸಲ್ಲಿಸಿದ ವಾದಪತ್ರ ಮತ್ತು ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಎರಡು ವಿವಾದ ಅಂಶಗಳನ್ನು ರಚಿಸಿತು.
1) ದಿನಾಂಕ 13.10.2017 ರಂದು ಶಾಲಾ ಆಡಳಿತ ಮಂಡಳಿ ಅಂಗೀಕರಿಸಿದ ನಿರ್ಣಯವು ಸೃಷ್ಟಿಸಿದ ದಾಖಲೆ ಎಂದು ಮೇಲ್ಮನವಿದಾರರು ಸಮರ್ಥಿಸಿಕೊಳ್ಳುತ್ತಾರೆಯೇ?
2) ರಾಜೀನಾಮೆ ಪತ್ರದ ಅಂಗೀಕಾರದಲ್ಲಿ MEPS ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ರಚಿಸಲಾದ ನಿಬಂಧನೆಗಳನ್ನು ಪಾಲಿಸಲಾಗಿಲ್ಲ ಎಂಬ ಮೇಲ್ಮನವಿದಾರರ ವಾದ ಸಮರ್ಥನೀಯವೇ?
ಮೇಲಿನ ಎರಡು ವಿವಾದಾಂಶಗಳನ್ನು ನಕಾರಾತ್ಮಕವಾಗಿ ಉತ್ತರಿಸಿದ ನ್ಯಾಯ ಪೀಠವು ಶಾಲಾ ಆಡಳಿತ ಮಂಡಳಿಯು ತನ್ನ ಲಿಖಿತ ಹೇಳಿಕೆಯ ಕಂಡಿಕೆ 10 ರಲ್ಲಿ ನೀಡಿದ ವಿವರಣೆಯನ್ನು ನ್ಯಾಯಮಂಡಳಿಯು ಪರಿಗಣಿಸಿಲ್ಲ. ಯಾವುದೇ ಸೂಕ್ತ ಕಾರಣಗಳು ಅಥವಾ ಸಾಕಷ್ಟು ಪುರಾವೆಗಳಿಲ್ಲದೆ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ನ್ಯಾಯ ಮಂಡಳಿಯು ಕೈಗೊಂಡ ತೀರ್ಮಾನ ದೋಷಪೂರಿತವಾಗಿದೆ. ಮೇಲ್ಮನವಿದಾರರು ಸ್ವ ಇಚ್ಛೆಯಿಂದ ರಾಜೀನಾಮೆಯನ್ನು ನೀಡಿರುತ್ತಾರೆ. ರಾಜೀನಾಮೆ ಅಂಗೀಕಾರವಾಗುವ ಮೊದಲು ಹಿಂತೆಗೆದುಕೊಳ್ಳಲು ಅವಕಾಶವಿದೆ.
ಆದರೆ, ಒಮ್ಮೆ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ ದಿನಾಂಕದಿಂದ ಉದ್ಯೋಗಿಯ ಸೇವೆ ಕೊನೆಗೊಳ್ಳುತ್ತದೆ. ಮೇಲ್ಮನವಿದಾರರು ದಿನಾಂಕ 10.10.2017 ರಂದು ರಾಜೀನಾಮೆ ಸಲ್ಲಿಸಿದರು. ದಿನಾಂಕ 13.10.2017 ರ ಆಡಳಿತ ಮಂಡಳಿ ಸಭೆಯ ನಿರ್ಣಯದ ಮೇರೆಗೆ ದಿನಾಂಕ 14.10.2017 ರಂದು ರಾಜೀನಾಮೆಯನ್ನು ಶಾಲಾ ಸಮಿತಿಯು ಅಂಗೀಕರಿಸಿತು. ಆದ್ದರಿಂದ ಮೇಲ್ಮನವಿದಾರರ ಸೇವೆ ಮುಕ್ತಾಯವಾಗುವ ದಿನಾಂಕ 14.10.2017 ಆಗಿರುತ್ತದೆ.
MEPS ಕಾಯಿದೆಯ ಸೆಕ್ಷನ್ 7 ಮತ್ತು ನಿಯಮ 40 ರಾಜೀನಾಮೆಯನ್ನು ಅಂಗೀಕರಿಸಲು ಯಾವುದೇ ಮಾರ್ಗಸೂಚಿಯನ್ನು ವಿಧಿಸುವುದಿಲ್ಲ. ರಾಜೀನಾಮೆ ಅಂಗೀಕಾರವಾದ ಕುರಿತು ಉದ್ಯೋಗಿಗೆ ತಿಳಿಸುವ ಮೊದಲು ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಅವಕಾಶವಿದೆ ಎಂಬುದಾಗಿ ಮೇಲ್ಮನವಿದಾರರು ಮಂಡಿಸಿದ ವಾದ ಒಪ್ಪತಕ್ಕದ್ದಲ್ಲ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಹಿಂಪಡೆಯಲು ಸಾರ್ವಜನಿಕ ಸೇವಕನಿಗೆ ಅವಕಾಶವಿಲ್ಲ ಎಂಬ ನಿಷ್ಕರ್ಷೆಗೆ ಬಂದ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ಬಾಂಬೆ ಹೈಕೋರ್ಟಿನ ಆದೇಶವನ್ನು ಸ್ಥಿರೀಕರಿಸಿ ಮೇಲ್ಮನವಿಯನ್ನು ವಜಾ ಗೊಳಿಸಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ