'ಸೊಸೆ' ಕುಟುಂಬದ ವ್ಯಾಪ್ತಿಯಲ್ಲಿ ಇಲ್ಲ, ಆಕೆ ಅನುಕಂಪದ ಉದ್ಯೋಗಕ್ಕೆ ಅರ್ಹರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
'ಸೊಸೆ' ಕುಟುಂಬದ ವ್ಯಾಪ್ತಿಯಲ್ಲಿ ಇಲ್ಲ, ಆಕೆ ಅನುಕಂಪದ ಉದ್ಯೋಗಕ್ಕೆ ಅರ್ಹರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
'ಕುಟುಂಬ' ಪದದ ವ್ಯಾಪ್ತಿಯಲ್ಲಿ ಸೊಸೆ ಬರುವುದಿಲ್ಲ. ಹಾಗಾಗಿ, ಸೊಸೆ ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕಾನೂನಿನ ಅಡಿಯಲ್ಲಿ ಕುಟುಂಬ ಎಂಬ ಪದದ ವ್ಯಾಖ್ಯಾನದ ಅಡಿಯಲ್ಲಿ ನಿರ್ದಿಷ್ಟ ಸಂಬಂಧಿಕರನ್ನು ಸೇರಿಸಿದ್ದಾರೆ. ಸೊಸೆಯನ್ನು ಕುಟುಂಬದ ವ್ಯಾಖ್ಯಾನದಲ್ಲಿ ಬರುವುದಿಲ್ಲ ಅವರು ವ್ಯಾಪ್ತಿಯಿಂದ ಹೊರಗಿದ್ದಾರೆ. ಸೊಸೆಗೆ ಅನುಕಂಪದ ಹುದ್ದೆ ನೀಡುವ ಸಲುವಾಗಿ ಕುಟುಂಬ ವ್ಯಾಖ್ಯೆಯ ಅಡಿಯಲ್ಲಿ ಸೇರಿಸಿ, ವ್ಯಾಖ್ಯಾನವನ್ನು ವಿಸ್ತರಿಸಿ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಬಾಗಲಕೋಟೆಯ ಪ್ರಿಯಾಂಕ ಹುಲಮನಿ ಅವರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಉದ್ದೇಶಕ್ಕೆ ಶಾಸನಾತ್ಮಕವಾಗಿ ಕಾನೂನು ಸ್ಪಷ್ಟವಾಗಿದೆ. ಶಾಸನದ ಅರ್ಥವನ್ನು ವಿಸ್ತರಿಸುವುದು ನಮ್ಮ ಕೆಲಸವಲ್ಲ. ನ್ಯಾಯಾಂಗವು ಶಾಸಕಾಂಗದ ಕಾರ್ಯ ಮಾಡಲಾಗದು. ನ್ಯಾಯಾಂಗ ತನ್ನ ಮಿತಿಯಲ್ಲೇ ವಿವೇಕದಿಂದ ವರ್ತಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅರ್ಜಿದಾರರ ಅತ್ತೆ ಉದ್ಯೋಗ ಮಾಡುತ್ತಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿ 2021ರ ಮೇ 2ರಂದು ಅವರು ಮೃತಪಟ್ಟರು. ಇದಾದ ಬೆನ್ನಲ್ಲೇ ಪತಿ ಕೂಡ ಕೊರೋನಾಗೆ ಬಲಿಯಾದರು.
ಹೀಗಾಗಿ, ಅನುಕಂಪದ ಅಡಿ ಉದ್ಯೋಗ ಕೋರಿ ಸೊಸೆ ಪ್ರಿಯಾಂಕ ಅರ್ಜಿ ಸಲ್ಲಿಸಿದ್ದರು. ಆದರೆ, ಇಲಾಖೆಯು ಪ್ರಿಯಾಂಕ ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಿಯಾಂಕ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕರ್ನಾಟಕ ಅಡಳಿತ ನ್ಯಾಯಮಂಡಳಿಯೂ ಈ ಅರ್ಜಿಯನ್ನು ತಿರಸ್ಕರಿಸಿತು. ಟ್ರಿಬ್ಯೂನಲ್ನ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯಲ್ಲಿ ಅವರು ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ಉದ್ಯೋಗ) ನಿಯಮ 2021 ಪ್ರಕಾರ ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆಯನ್ನು ಸೇರಿಸಬೇಕು ಮತ್ತು ತಮಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದರು.