ಖೋಟಾ ನೋಟು: ಆರೋಪಿಗೆ 5 ವರ್ಷ ಜೈಲು, ದಂಡ ಶಿಕ್ಷೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಖೋಟಾ ನೋಟು: ಆರೋಪಿಗೆ 5 ವರ್ಷ ಜೈಲು, ದಂಡ ಶಿಕ್ಷೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
500 ರೂಪಾಯಿ ಮೌಲ್ಯದ ಖೋಟಾ ನೋಟು ಹೊಂದಿದ್ದ ಆರೋಪಿಗೆ 5 ವರ್ಷ ಜೈಲು ಮತ್ತು 3000 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಮೈಸೂರಿನ ನಿವಾಸಿ ಟಿ.ಎನ್. ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 489B, 489C ಅಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಟಿ.ಎನ್. ಕುಮಾರ್ ಅವರ ಬಳಿ ನಕಲಿ ನೋಟುಗಳು ಪತ್ತೆಯಾಗಿದ್ದು, ಅವರು ಅದನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು ಬಿಟ್ಟರೆ ಬೇರಾವ ಸಾಕ್ಷಿಗಳೂ ಇಲ್ಲ. ಹೀಗಾಗಿ ಪೊಲೀಸರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬಾರದು ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಆರೋಪಿ ಬಳಿ ಖೋಟಾ ನೋಟು ಹೇಗೆ ಬಂತು ಮತ್ತು ಅದರ ಮೂಲ ಯಾವುದು ಎಂಬುದನ್ನು ಅರ್ಜಿದಾರರು ವಿವರಿಸಿಲ್ಲ. ಅರ್ಜಿದಾರರ ಬಳಿ ಸಿಕ್ಕಿರುವ ಎಲ್ಲ ಖೋಟಾ ನೋಟುಗಳು ಒಂದೇ ನಂಬರ್ ಹೊಂದಿದ್ದು, ಅವುಗಳೆಲ್ಲವೂ ನಕಲಿ ಎಂಬುದಾಗಿ ಆರ್‌ಬಿಐ ದೃಢಪಡಿಸಿದೆ ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ, ಪೊಲೀಸರು ನಂಬಲರ್ಹ ಸಾಕ್ಷಿಗಳಲ್ಲ ಎಂದು ಯಾರೂ ಊಹಿಸಲಾಗದು. ಭಾರತೀಯ ಸಾಕ್ಷ್ಯ ಕಾಯ್ದೆಯಡಿ ಪೊಲೀಸರ ಸಾಕ್ಷ್ಯವು ವಿಶ್ವಾಸಾರ್ಹವಾಗಿದ್ದರೆ ಅಂತಹ ಸಾಕ್ಷ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಆರೋಪಿ ಕಲರ್ ಜೆರಾಕ್ಸ್ ನೋಟುಗಳನ್ನು ಹೊಂದಿದ್ದು, ಅವುಗಳನ್ನು ಅಸಲಿ ಎಂದು ಬಿಂಬಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಎಂಬ ಅಭಿಯೋಜನೆಯ ವಾದವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ. ಇವೆಲ್ಲವನ್ನೂ ಗಮನಿಸಿದಾಗ ಆರೋಪಿ ಖೋಟಾ ನೋಟು ಚಲಾವಣೆಯಲ್ಲಿ ಭಾಗಿಯಾಗಿರುವ ಆರೋಪ ಸಿದ್ದವಾಗುತ್ತದೆ. ಹಾಗಾಗಿ ವಿಚಾರಣಾ ನ್ಯಾಯಾಲಯದ ತೀರ್ಪು ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆರೋಪಿ ತನ್ನ ಶಿಕ್ಷೆಯನ್ನು ಪೂರ್ಣಗೊಳಿಸಲು ಶರಣಾಗಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅರ್ಜಿದಾರರಿಗೆ ಸೂಚಿಸಿದೆ.