ಜಾತಕ ದೋಷ ಸರಿಪಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಜ್ಯೋತಿಷಿ ವಿರುದ್ಧ ಕೇಸ್ ರದ್ದುಗೊಳಿಸಲ್ಲ ಎಂದ ಹೈಕೋರ್ಟ್
ಜಾತಕ ದೋಷ ಸರಿಪಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಜ್ಯೋತಿಷಿ ವಿರುದ್ಧ ಕೇಸ್ ರದ್ದುಗೊಳಿಸಲ್ಲ ಎಂದ ಹೈಕೋರ್ಟ್
ಮಹಿಳೆಯೊಬ್ಬರ ಜಾತಕದಲ್ಲಿ ದೋಷ ಇದೆ ಎಂದು ನಂಬಿಸಿದ ಜ್ಯೋತಿಷಿಯೊಬ್ಬ ಅದನ್ನು ಸರಿಪಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮದ್ದೂರಿನ ಅನ್ನಪೂರ್ಣೇಶ್ವರಿ ಮಹಾಕಾಳಿ ಜ್ಯೋತಿಷ್ಯಾಲಯದ ಕಾಮುಕ ಆರೋಪಿ/ಅರ್ಜಿದಾರ ಮೋಹನ್ ದಾಸ್ ಆಲಿಯಾಸ್ ಶಿವರಾಮು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣದ ವಿವರ
2014ರಲ್ಲಿ ಮದುವೆಯಾಗಿದ್ದ ಪತಿ ಪತ್ನಿಯರ ನಡುವೆ ಹಿತವಾದ ಸಂಬಂಧ ಇರಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷಿಯನ್ನು ಭೇಟಿಯಾಗುವಂತೆ ಪತ್ನಿಯನ್ನು ಪತಿಯ ಕುಟುಂಬದವರು ಒತ್ತಾಯಿಸಿದ್ದರು. ಅದರಂತೆ ಪತಿ ತನ್ನ ಪತ್ನಿಯನ್ನು ಆರೋಪಿ ಜ್ಯೋತಿಷಿ ಬಳಿ ಕುಂಡಲಿ ಪೂಜೆಗಾಗಿ ಕರೆದೊಯ್ದಿದ್ದರು.
ಈ ಭೇಟಿ ವೇಳೆ, ಪತ್ನಿಯ ಉಪಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಜ್ಯೋತಿಷಿ, ಆಕೆಯ ದೇಹವನ್ನು ಸ್ಪರ್ಷಿಸಿ ಅನುಚಿತವಾಗಿ ವರ್ತಿಸಿದ್ದರು. ಇದಕ್ಕೆ ಪ್ರತಿರೋಧಿಸದಂತೆ ಪತಿ ತಡೆದರು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದರು.
ದೂರನ್ನು ದಾಖಲಿಸಿಕೊಂಡ ಮದ್ದೂರು ಪೊಲೀಸರು ಜ್ಯೋತಿಷಿ ಮತ್ತು ಮಹಿಳೆಯ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸೆಕ್ಷನ್ 498A, 354, 354A, 508, ಸಹವಾಚಕ 34 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದರು.