ಜಡ್ಜ್ ಪತ್ನಿಯ ಅನುಮಾನಾಸ್ಪದ ಸಾವು: ಪೊಲೀಸರ ಪಕ್ಷಪಾತದ ಧೋರಣೆ ವಿರುದ್ಧ ಮೃತರ ತಾಯಿ ದೂರು - ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಜಡ್ಜ್ ಪತ್ನಿಯ ಅನುಮಾನಾಸ್ಪದ ಸಾವು: ಪೊಲೀಸರ ಪಕ್ಷಪಾತದ ಧೋರಣೆ ವಿರುದ್ಧ ಮೃತರ ತಾಯಿ ದೂರು - ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಹಿರಿಯ ನ್ಯಾಯಾಂಗ ಅಧಿಕಾರಿಯೊಬ್ಬರ ಪತ್ನಿಯ ಅನುಮಾನಾಸ್ಪದ ಸಾವಿಗೀಡಾದ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ.
ಈ ಸಾವಿನ ತನಿಖೆಯಲ್ಲಿ ಪೊಲೀಸರ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆ ಎಂದು ಮೃತ ಮಹಿಳೆಯ ತಾಯಿ ದೂರು ನೀಡಿದ್ದು, ಪ್ರಕರಣವನ್ನು ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
2016ರಲ್ಲಿ ರಂಜನಾ ದಿವಾನ್ ಅವರು ಮೃತಪಟ್ಟಿದ್ದರು. ಸಾವಿನ ನಂತರ, ಆಕೆಯ ಸಾವಿನ ಬಗ್ಗೆ ಅನುಮಾನ ಕಾಡಿತ್ತು. ಸ್ವತಃ ಆಕೆಯ ಕುಟುಂಬಸ್ಥರು ಈ ಅನುಮಾನ ವ್ಯಕ್ತಪಡಿಸಿದ್ದು, ಪತಿ ನ್ಯಾಯಾಂಗ ಅಧಿಕಾರಿಯಾಗಿರುವ ಕಾರಣ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿದ್ದರು.
ಚತ್ತೀಸ್‌ಗಢ ಪೊಲೀಸರು ಈ ಸಾವಿನ ತನಿಖೆಯಲ್ಲಿ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆ. ಅನಗತ್ಯವಾದ ಪ್ರಭಾವಕ್ಕೊಳಗಾಗಿದ್ದಾರೆ ಎಂದು ಮೃತರ ತಾಯಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಿದ್ದಾರೆ.
ಇಡೀ ಘಟನೆ ಮತ್ತು ಮರಣದ ಸಂದರ್ಭದಲ್ಲಿ ಮೃತರ ದೇಹದಲ್ಲಿ ಕಂಡುಬಂದಿರುವ ಗಾಯಗಳ ಬಗ್ಗೆ ಗಂಭೀರವಾದ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಅವರು ಸುಪ್ರೀಂ ಕೋರ್ಟ್‌ನ್ನು ಬೇಡಿಕೊಂಡಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಮ್‌ನಾಥ್ ಮತ್ತು ಪ್ರಸನ್ನ ಬಾಲಚಂದ್ರ ವರಾಳೆ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.
ರಂಜನಾ ಅವರು ಪತಿ ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರತ ನ್ಯಾಯಾಧೀಶರಾಗಿರುವುದರಿಂದ ನ್ಯಾಯಯುತ ತನಿಖೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಮೃತರ ದೇಹದ ಮೇಲೆ ಆರು ಗಾಯಗಳಿವೆ ಎಂಬುದನ್ನು ಮರಣೋತ್ತರ ಪರೀಕ್ಷಾ ವರದಿಗಳು ತಿಳಿಸಿವೆ ಎಂಬುದನ್ನು ರಂಜನಾ ತಾಯಿ ಕಳವಳ ವ್ಯಕ್ತಪಡಿಸಿದ್ದರು.
ಇದನ್ನು ಗಮನಿಸಿದ ನ್ಯಾಯಪೀಠ, ಪ್ರಕರಣದ ಸಂಪೂರ್ಣ ಸನ್ನಿವೇಶವನ್ನು ಪರಿಗಣಿಸಿ ಮೃತ ಮಹಿಳೆಯ ಸಾವಿನ ತನಿಖೆ ನಡೆಸುವಂತೆ ಸಿಬಿಐಗೆ ಸೂಚನೆ ನೀಡಿತು. ಪ್ರಕರಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ತನಿಖೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಸಹಕರಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ, ಅಗತ್ಯವಿರುವ ಎಲ್ಲ ದಾಖಲೆಗಳು ಮತ್ತು ತನಿಖೆಗೆ ಬೇಕಾದ ಅಗತ್ಯ ನೆರವನ್ನು ನೀಡುವಂತೆ ರಾಜ್ಯ ಸರ್ಕಾರ ಮತ್ತು ಎಲ್ಲ ಇಲಾಖೆಗೆ ಸೂಚನೆ ನೀಡಿದೆ.
ಪ್ರಕರಣ: ಮಂದಾಕಿನಿ ದಿವಾನ್ Vs ಚತ್ತೀಸ್‌ಗಢ ಹೈಕೋರ್ಟ್ ಮತ್ತಿತರರು
ಸುಪ್ರೀಂ ಕೋರ್ಟ್