ಪತ್ನಿ-ಮಕ್ಕಳಿಗೆ ಜೀವನಾಂಶ ಪತಿಯ ಪರಮ ಕರ್ತವ್ಯ: ಗಂಡನಿಗೆ ಪಾಠ ಹೇಳಿದ ಕರ್ನಾಟಕ ಹೈಕೋರ್ಟ್
ಪತ್ನಿ-ಮಕ್ಕಳಿಗೆ ಜೀವನಾಂಶ ಪತಿಯ ಪರಮ ಕರ್ತವ್ಯ: ಗಂಡನಿಗೆ ಪಾಠ ಹೇಳಿದ ಕರ್ನಾಟಕ ಹೈಕೋರ್ಟ್
ವಿಚ್ಚೇದನ ಪ್ರಕರಣಗಳಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕಾದದ್ದು ಪತಿಯ ಕರ್ತವ್ಯ. ತಂದೆಯಾದವನು ನೆಪ ಹೇಳಿ ಮಗುವಿನ ನಿರ್ವಹಣೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪತ್ನಿಯು ಮಗುವಿನ ಲಾಲನೆ ಪಾಲನೆಗಾಗಿ ಉದ್ಯೋಗ ತೊರೆದಿದ್ದಾರೆ. ತಂದೆಯು ಮಗುವಿನ ಶಾಲಾ ಶುಲ್ಕ ಪಾವತಿಸಿರಬಹುದು. ಹಾಗೆಂದ ಮಾತ್ರಕ್ಕೆ ಜೀವನಾಂಶ ಮೊತ್ತ ಪಾವತಿಸುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ಹೇಳಿದೆ.
ಪತ್ನಿ ಮತ್ತು ಮಗುವಿನ ಮಧ್ಯಂತರ ಜೀವನಾಂಶವಾಗಿ ಪ್ರತಿ ತಿಂಗಳು ತಲಾ ಐದು ಸಾವಿರ ರೂ. ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಬಳ್ಳಾರಿಯ ಖಾಸಗಿ ಕಾಲೇಜಿನ ಪ್ರಾಧ್ಯಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರ ಪತಿಯ ಪರ ವಾದ ಮಂಡಿಸಿದ್ದ ವಕೀಲರು, ಅರ್ಜಿದಾರರು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಮಾಸಿಕ 30 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಹೀಗಿರುವಾಗ ತಲಾ ಐದು ಸಾವಿರ ನೀಡುವದು ಕಷ್ಟ ಎಂದು ವಿವರಿಸಿದರು.
ಅಲ್ಲದೆ, 2022ರಿಂದ ಮಗುವಿನ ಶಾಲೆಯ ಶುಲ್ಕವನ್ನು ಅರ್ಜಿದಾರರೇ ಪಾವತಿಸುತ್ತಿದ್ದಾರೆ. ಪತ್ನಿಯು ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಆಕೆಗೆ ತನ್ನಿಂದ ಜೀವನಾಂಶ ಪಡೆಯುವ ಅವಶ್ಯಕತೆ ಇಲ್ಲ ಎಂದು ವಾದಿಸಿದ್ದರು. ಈ ಅಂಶಗಳನ್ನು ಪರಿಗಣಿಸಿ ತನ್ನ ಅರ್ಜಿಯನ್ನು ಪುರಸ್ಕರಿಸಬೇಕು ಮತ್ತು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಆದರೆ, ಪ್ರತಿವಾದಿ ಪತ್ನಿಯ ಪರ ವಾದಿಸಿದ ವಕೀಲರು, ಮಗು ಜನಿಸಿದ ಬಳಿಕ ಪತ್ನಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮಗುವಿನ ಆರೈಕೆ, ಲಾಲನೆ ಪಾಲನೆ ಮಾಡುತ್ತಿದ್ದಾರೆ. ವಿಚಾರಣಾ ನ್ಯಾಯಾಲಯ ನೀಡಿದ ಆದೇಶದ ಮೊತ್ತವನ್ನು ಪಾವತಿಸಲು ಪತಿಗೆ ಅಸಾಧ್ಯವೇನೂ ಅಲ್ಲ. ಆದ್ದರಿಂದ ಅರ್ಜಿದಾರ ಪತಿಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದಿಸಿದ್ದರು.
ಪ್ರತಿವಾದಿಗಳ ಪರ ವಕೀಲರ ಹೇಳಿಕೆಯಂತೆ ವಿಚಾರಣಾ ನ್ಯಾಯಾಲಯದ ಆದೇಶದ ಬಳಿಕ ಅರ್ಜಿದಾರರು ಕೇವಲ 30 ಸಾವಿರ ರೂ. ಜೀವನಾಂಶದ ರೂಪದಲ್ಲಿ ಪಾವತಿಸಿದ್ದಾರೆ. ಇನ್ನೂ 3.70 ಲಕ್ಷ ರೂ. ಬಾಕಿ ಇರಿಸಿದ್ದಾರೆ. ಈ ಬಾಕಿ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಅರ್ಜಿದಾರರು ಹೇಳಿದರು. ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಜೀವನಾಂಶದ ಬಾಕಿ ಸಮೇತ ಪತ್ನಿಗೆ ಹಣ ನೀಡುವಂತೆ ನಿರ್ದೇಶನ ನೀಡಿತು.