NDPS Act: ವಶಪಡಿಸಿದ ವಾಹನ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ- ಕರ್ನಾಟಕ ಹೈಕೋರ್ಟ್
NDPS Act: ವಶಪಡಿಸಿದ ವಾಹನ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ- ಕರ್ನಾಟಕ ಹೈಕೋರ್ಟ್
NDPS Actನಡಿ ಪೊಲೀಸರು ವಶಕ್ಕೆ ಪಡೆದುಕೊಂಡ ವಾಹನವನ್ನು ಷರತ್ತಿನ ಮೇಲೆ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಕಲ್ಬುರ್ಗಿ ವಿಭಾಗೀಯ ಪೀಠದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಿಂದ ಬಾಧಿತರಾದ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿದಾರರು ವೃತ್ತಿಪರ ಗೂಡ್ಸ್ ವಸ್ತುಗಳ ಸಾಗಣೆದಾರರಾಗಿದ್ದು, ದೇಶದ ವಿವಿಧೆಡೆ ಸರಕು ಸರಂಜಾಮುಗಳನ್ನು ಸಾಗಿಸುವ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಪಂಜಾಬಿನ ಲುಧಿಯಾನದಿಂದ ತ್ರಿಪುರಾ ಹಾಗೂ ತಮಿಳುನಾಡಿನ ಕೊಯಮತ್ತೂರಿಗೆ ಸಿದ್ಧ ಉಡುಪಿ ಹಾಗೂ ಜವಳಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದು, ಇಂಡಿ ತಾಲೂಕಿನ ಚೆಕ್‌ಪೋಸ್ಟ್‌ವೊಂದರಲ್ಲಿ ಈ ವಸ್ತುಗಳನ್ನು ಪರಿಶೀಲಿಸಿದಾಗ, ಗೂಡ್ಸ್ ವಾಹನದಲ್ಲಿ ಇದ್ದ ಮಾಲುಗಳಲ್ಲಿ 10 ಪ್ಯಾಕೆಟ್ ಗಾಂಜಾ ಹಾಗೂ ಮಾದಕ ವಸ್ತುಗಳಿದ್ದು, ಅದನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಯಿತು. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗಿತ್ತು.
ವಾಹನದ ಚಾಲಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ವಾಹನದ ಮಾಲಕರು ವಿಶೇಷ ನ್ಯಾಯಾಲಯದಲ್ಲಿ CrPC ಸೆಕ್ಷನ್ 457ರ ಅನ್ವಯ (ಭಾರತೀಯ ನ್ಯಾಯ್ ಸಂಹಿತ ಸೆಕ್ಷನ್ 497 ಮತ್ತು 503) ವಾಹನದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದರು. ಅದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತು. ಆ ಬಳಿಕ ಅರ್ಜಿದಾರರು ಡ್ರಗ್ಸ್ ಡಿಸ್‌ಪೋಸಲ್ ಕಮಿಟಿ ಮುಂದೆ ವಾಹನ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದರು. ಅಬಕಾರಿ ಆಯುಕ್ತರ ಟಿಪ್ಪಣಿ ಕೋರಿ ಆ ಸಮಿತಿ ಅರ್ಜಿಯನ್ನು ಹಿಂಬರಹದೊಂದಿಗೆ ವಾಪಸ್ ಮಾಡಿತು.
ಇದರಿಂದ ಬಾಧಿತರಾದ ಅರ್ಜಿದಾರರು ಹೈಕೋರ್ಟ್ ಮೊರೆ ಹೋದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, CrPC ಸೆಕ್ಷನ್ 457, ಪ್ರಸಕ್ತ ಚಾಲ್ತಿಯಲ್ಲಿ ಇರುವ ಭಾರತೀಯ ನ್ಯಾಯ್ ಸಂಹಿತ ಸೆಕ್ಷನ್ 497 ಮತ್ತು 503ರ ಪ್ರಕಾರ ವಿಚಾರಣಾ ನ್ಯಾಯಾಲಯಕ್ಕೆ NDPS Actನಡಿ ವಶಪಡಿಸಿದ ವಾಹನ ಬಿಡುಗಡೆ ಮಾಡಲು ಅಧಿಕಾರವಿದೆ ಎಂದು ತೀರ್ಪು ನೀಡಿತು.
ಪ್ರಕರಣ: ಕವಲ್ ಜೀತ್ ಕೌರ್ Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್ Crl.P. 200895/2024 Dated 05-08-2024