ಪೊಲೀಸರ ವಿರುದ್ಧದ "ಇಲಾಖಾ ವಿಚಾರಣೆ" ನಿಯಮ ಬದಲು: ನಿವೃತ್ತ ಜಡ್ಜ್ ಹೆಗಲಿಗೆ ಹೊಸ ಜವಾಬ್ದಾರಿ
ಪೊಲೀಸರ ವಿರುದ್ಧದ "ಇಲಾಖಾ ವಿಚಾರಣೆ" ನಿಯಮ ಬದಲು: ನಿವೃತ್ತ ಜಡ್ಜ್ ಹೆಗಲಿಗೆ ಹೊಸ ಜವಾಬ್ದಾರಿ
ಪೊಲೀಸ್ ಇಲಾಖೆಯಲ್ಲಿ ವಿವಿಧ ಆರೋಪ ಎದುರಿಸುತ್ತಿರುವ ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆ (ಡಿಪಾರ್ಟ್ಮೆಂಟಲ್ ಎನ್ಕ್ವಯರಿ)ಯ ಪದ್ಧತಿಯನ್ನು ಬದಲಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಇಲಾಖಾ ವಿಚಾರಣೆಯ ಹಿಂದಿನ ನಿಯಮದ ಪ್ರಕಾರ, ಆಯಾ ಘಟಕದ ಅಧಿಕಾರಿಯನ್ನೇ ಪ್ರಕರಣದ ವಿಚಾರಣೆಗೆ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗುತ್ತಿತ್ತು. ಇನ್ನು ಮುಂದೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶದ ಜೊತೆಗೆ ಜಿಲ್ಲಾವಾರು ಇಲಾಖಾ ವಿಚಾರಣೆ ನಡೆಸಲು ಒಪ್ಪಿಕೊಂಡಿರುವ 119 ನಿವೃತ್ತ ನ್ಯಾಯಾಧೀಶರ ಹೆಸರುಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಆಯಾ ವಲಯ, ಇಲ್ಲವೇ ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರನ್ನು ನೇಮಕಗೊಳಿಸಲಾಗುತ್ತದೆ. ಅಧಿಕಾರಿ ಬದಲು ನಿವೃತ್ತ ನ್ಯಾಯಾಧೀಶರನ್ನು ಈ ಕಾರ್ಯಕ್ಕೆ ನೇಮಿಸಿದರೆ, ವಿಳಂಬಗತಿಯಲ್ಲಿ ಸಾಗುವ ಇಲಾಖಾ ವಿಚಾರಣೆಯನ್ನು ಕ್ಷಿಪ್ರಗತಿಯಲ್ಲಿ ಮುಕ್ತಾಯಗೊಳಿಸಬಹುದು ಎಂಬುದು ಈ ಹೊಸ ನಿಯಮದ ಮೂಲ ಉದ್ದೇಶ.
ಕರ್ತವ್ಯ ಲೋಪ, ಭ್ರಷ್ಟಾಚಾರ, ಶಿಷ್ಟಾಚಾರ ಉಲ್ಲಂಘನೆ, ಅಶಿಸ್ತು, ಮೇಲಾಧಿಕಾರಿಗಳ ಮೇಲೆ ದುರ್ವರ್ತನೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಆರೋಪ ಎದುರಿಸುವ ಪ್ರಕರಣಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗುತ್ತದೆ.
ಹಳೆ ಪದ್ಧತಿಯಲ್ಲಿ ಇರುವ ಸಮಸ್ಯೆಗಳೇನೆಂದರೆ;
ಕರ್ತವ್ಯ ನಿರತ ಅಧಿಕಾರಿಯೇ ವಿಚಾರಣಾಧಿಕಾರಿಯಾದರೆ ಪ್ರಕರಣದ ವಿಚಾರಣೆಯಲ್ಲಿ ವಿಳಂಬವಾಗುತ್ತದೆ. ದಿನನಿತ್ಯದ ಕರ್ತವ್ಯಗಳ ಜೊತೆಗೆ ಹೆಚ್ಚುವರಿ ಕೆಲಸವಾಗಿ ಈ ವಿಚಾರಣೆ ನಡೆಸುವುದರಿಂದ ಈ ವಿಳಂಬ ಅನಿವಾರ್ಯವಾಗುತ್ತದೆ. ವಿಚಾರಣೆ ವಿಳಂಬವಾಗುವುದು ಆರೋಪಿತ ಸಿಬ್ಬಂದಿಗೆ ಅನಾನುಕೂಲ ಹಾಗೂ ಅನಗತ್ಯ ಕಿರಿಕಿರಿಯ ವಿಷಯವಾಗಿರುತ್ತದೆ.
ಹೆಚ್ಚಿನ ಸಂದರ್ಭದಲ್ಲಿ ಇಲಾಖಾ ಅಧಿಕಾರಿ ಯಾ ಸಿಬ್ಬಂದಿಯ ವಿರುದ್ಧವೇ ಆರೋಪ ಇರುವ ಕಾರಣ ಪಾರದರ್ಶಕ ವಿಚಾರಣೆ ಅಸಾಧ್ಯವಾಗುತ್ತದೆ ಎಂಬ ಆರೋಪ ಇದೆ. ಬಹುತೇಕ ಕೇಸ್ಗಳಲ್ಲಿ ಡಿಇ ಆದೇಶವಾಗುತ್ತಿದ್ದಂತೆಯೇ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ. ಅಂತಿಮ ವರದಿ ಸಲ್ಲಿಸುವ ವರೆಗೆ ಅಮಾನತಿಗೊಳಗಾದ ಅಧಿಕಾರಿಗೆ ಅರ್ಧ ವೇತನ ಕೊಡಬೇಕು.
ಹೊಸ ನಿಯಮದಿಂದ ಆಗುವ ಲಾಭವೇನೆಂದರೆ;
ನಿವೃತ್ತ ನ್ಯಾಯಾಧೀಶರು ಪಾರದರ್ಶಕ ವಿಚಾರಣೆ ನಡೆಸುತ್ತಾರೆ. ಸಾಕ್ಷ್ಯಾಧಾರಗಳ ಮೌಲ್ಯೀಕರಣ ಸಮರ್ಪಕವಾಗಿ ನಡೆಯುವ ವಿಶ್ವಾಸ ಹಾಗೂ ಇಲಾಖೆಯ ಅಧಿಕಾರಿಗಳದ್ದೇ ಆದ ತಪ್ಪಿಗೆ ಮುಲಾಜಿಲ್ಲದೆ ನ್ಯಾಯತೀರ್ಮಾನ ನಡೆಸಬಹುದು.
ನಿವೃತ್ತ ಜಡ್ಜ್ರಿಗೆ ಬೇರೆ ಯಾವುದೇ ಕರ್ತವ್ಯ ಇಲ್ಲದಿರುವುದರಿಂದ ಕ್ಷಿಪ್ರ ನ್ಯಾಯತೀರ್ಮಾನ ನಡೆಸಬಹುದು. ಇದರಿಂದ ಅಮಾಯಕ ಸಿಬ್ಬಂದಿಗೆ ತಕ್ಷಣದ ಪರಿಹಾರ ಸಿಗುವ ಸಾಧ್ಯತೆ ಇದೆ.