-->
Political Influence in transfer of Govt Employee | ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

Political Influence in transfer of Govt Employee | ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

Political Influence in transfer of Govt Employee | ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು






ಸರಕಾರಿ ನೌಕರರ ವರ್ಗಾವಣೆ, ಸ್ಥಳ ನಿಯುಕ್ತಿ ವಿಷಯದಲ್ಲಿ ರಾಜಕೀಯ ಪ್ರಭಾವ ಅನಪೇಕ್ಷಿತ- ಉದ್ಯೋಗಿಯ ಕಡ್ಡಾಯ ನಿವೃತ್ತಿ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್


ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಷಯದಲ್ಲಿ ಸರಕಾರಿ ನೌಕರರು ರಾಜಕೀಯ ಪ್ರಭಾವವನ್ನು ತರುತ್ತಿರುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ತನ್ನ ಉದ್ಯೋಗಿಗೆ ನೀಡಿರುವ ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಅಪ್ರಸ್ತುತ ಅಂಶಗಳು ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವುದರಿಂದ ಸೇವಾ ವಿಷಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಅನಪೇಕ್ಷಿತವಾಗಿದೆ ಎಂದು ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್ ಕೃಷ್ಣ ದೀಕ್ಷಿತ್ ಮತ್ತು ಶ್ರೀ ರಾಮಚಂದ್ರ ಡಿ ಹುದ್ದಾರ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವಿರುದ್ಧ ಎಂ ವೀಣಾ ಈ ಪ್ರಕರಣದಲ್ಲಿ ದಿನಾಂಕ 2.7.2024 ರಂದು ನೀಡಿದ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ. ಶ್ರೀಮತಿ ಎಂ ವೀಣಾ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಇಲ್ಲಿ ಕಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದಿನಾಂಕ 12.7.2002 ರಂದು ಅವರನ್ನು ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗುವ ಬದಲು ವೀಣಾ ಅವರು ವೈದ್ಯಕೀಯ ಕಾರಣಗಳಿಗಾಗಿ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ವೀಣಾ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆ ಅನುಮಾನಗೊಂಡ ನಿಗಮದ ಆಡಳಿತವು ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಮಂಡಳಿಯ ಮುಂದೆ ಪರೀಕ್ಷೆಗೆ ಹಾಜರಾಗಲು ವೀಣಾ ಅವರಿಗೆ ನಿರ್ದೇಶಿಸಿತು. ವೈದ್ಯಕೀಯ ಮಂಡಳಿಯ ಮುಂದೆ ತಪಾಸಣೆಗೆ ಹಾಜರಾದ ವೀಣಾ ಅವರನ್ನು ಪರೀಕ್ಷಿಸಿದ ವೈದ್ಯರು ಆಕೆ ಸ್ವಲ್ಪ ಅಲರ್ಜಿಯಿಂದ ಬಳಲುತ್ತಿದ್ದರೂ, ವೈದ್ಯಕೀಯ ನೆಲೆಯಲ್ಲಿ ರಜೆ ಪಡೆಯುವ ದೈಹಿಕ ಅನಾರೋಗ್ಯ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ವರ್ಗಾವಣೆಯನ್ನು ರದ್ದು ಪಡಿಸಲು ವೀಣಾ ಅವರು ಸಂಸದರೊಬ್ಬರ ಮೂಲಕ ರಾಜಕೀಯ ಪ್ರಭಾವವನ್ನು ತಂದಿರುವುದನ್ನು ನಿಗಮದ ಶಿಸ್ತು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿತು. ರಾಜಕೀಯ ಹಸ್ತಕ್ಷೇಪದ ಕಾರಣಗಳಿಗಾಗಿ ಇಲಾಖಾ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರವು ದಿನಾಂಕ 8.7.2004 ರಂದು ಆಕೆಯನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸುವ ಆದೇಶ ಹೊರಡಿಸಿತು.


ಸದರಿ ಆದೇಶದಿಂದ ಬಾಧಿತರಾದ ವೀಣಾ ಅವರು ಇಲಾಖಾ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರು. ಶಿಸ್ತು ಪ್ರಾಧಿಕಾರ ಹೊರಡಿಸಿದ ಆದೇಶವನ್ನು ಮೇಲ್ಮನವಿ ಪ್ರಾಧಿಕಾರವು ದಿನಾಂಕ 31.10.2009 ರ ಆದೇಶದಲ್ಲಿ ಸ್ಥಿರೀಕರಿಸಿತು. ಸದರಿ ಆದೇಶದಿಂದ ಬಾಧಿತರಾದ ವೀಣಾ ಅವರು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಂಖ್ಯೆ 35246/2009 ಅನ್ನು ದಾಖಲಿಸಿದರು.


ವೈದ್ಯಕೀಯ ಕಾರಣಗಳಿಗಾಗಿ ಅನಧಿಕೃತವಾಗಿ ಗೈರುಹಾಜರಾಗಿರುವ ಉದ್ಯೋಗಿಯ ದುರ್ವರ್ತನೆಗಾಗಿ ಶಿಸ್ತು ಪ್ರಾಧಿಕಾರವು ನೀಡಿರುವ ಕಡ್ಡಾಯ ನಿವೃತ್ತಿಯ ದಂಡನೆಯು ಆಘಾತಕಾರಿ ಹಾಗೂ ಅಸಮಾನವಾಗಿದೆ ಎಂಬ ಅಭಿಪ್ರಾಯವನ್ನು ತಳೆದ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠವು ದಿನಾಂಕ 20.3.2013 ರಂದು ತೀರ್ಪು ಘೋಷಿಸಿ ರಿಟ್ ಅರ್ಜಿಯನ್ನು ಪುರಸ್ಕರಿಸಿತು.


ರಿಟ್ ಅರ್ಜಿದಾರರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದ ಶಿಸ್ತು ಪ್ರಾಧಿಕಾರದ ಆದೇಶವನ್ನು ಹಾಗೂ ಸದರಿ ಆದೇಶವನ್ನು ಸ್ಥಿರೀಕರಿಸಿದ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿತು. ಕರ್ತವ್ಯಕ್ಕೆ ಗೈರು ಹಾಜರಾದ ಅವಧಿಯ ವೇತನ ಹಾಗೂ ಇತರ ಭತ್ಯೆಗಳ ಆರ್ಥಿಕ ಸೌಲಭ್ಯಗಳನ್ನು ನೀಡದೆ ರಿಟ್ ಅರ್ಜಿದಾರರನ್ನು ಸೇವೆಗೆ ಮರುನಿಯುಕ್ತಿಗೊಳಿಸಲು ಆದೇಶಿಸಿತು.


ಏಕ ಸದಸ್ಯ ನ್ಯಾಯ ಪೀಠದ ಆದೇಶದಿಂದ ಭಾದಿತರಾದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ರಿಟ್ ಅಪೀಲ್ ಸಂಖ್ಯೆ 1534/2016 ಅನ್ನು ದಾಖಲಿಸಿತು. ನಿಗಮದ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.


ಉದ್ಯೋಗಿಯು ತಾನು ವರ್ಗಾವಣೆಯಾದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವುದನ್ನು ತಪ್ಪಿಸುವ ಸಲುವಾಗಿ ಅನಾರೋಗ್ಯದ ಕಾರಣ ನೀಡಿ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. ಉಡುಪಿಯ ಜಿಲ್ಲಾಸ್ಪತ್ರೆಯ ವೈದ್ಯಕೀಯ ವರದಿ ಆಕೆಯ ಪ್ರಕರಣವನ್ನು ಬೆಂಬಲಿಸಿಲ್ಲ. ಆಕೆಯು ಅನಾರೋಗ್ಯದ ಆಧಾರದಲ್ಲಿ ರಜೆ ಪಡೆಯುವ ಯಾವುದೇ ಸಮರ್ಥನೀಯ ಕಾರಣಗಳು ಕಂಡು ಬರುತ್ತಿಲ್ಲ ಎಂದು ವೈದ್ಯರು ನಿರ್ದಿಷ್ಟವಾಗಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ವರ್ಗಾವಣೆಯನ್ನು ರದ್ದು ಪಡಿಸಲು ರಾಜಕೀಯ ಪ್ರಭಾವವನ್ನು ತಂದಿರುತ್ತಾರೆ. ಆದುದರಿಂದ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ತಿರಸ್ಕರಿಸಬೇಕಾಗಿ ಪ್ರಾರ್ಥಿಸಿದರು.


ಶ್ರೀಮತಿ ಎಂ ವೀಣಾ ಅವರ ಪರ ವಕೀಲರು ಈ ಕೆಳಗಿನ ವಾದ ಮಂಡಿಸಿದರು. ಉದ್ಯೋಗಿಯ ಮನವಿಯನ್ನು ಆಡಳಿತ ಮಂಡಳಿಯು ಪರಿಗಣಿಸದೆ ಇರುವುದು ವಿಷಾದನೀಯ. ಉದ್ಯೋಗಿಯ ಸೇವಾ ಚರಿತ್ರೆಯನ್ನು ಪರಿಗಣಿಸಿದಾಗ ಯಾವುದೇ ಪ್ರತಿಕೂಲ ವರದಿ ಕಂಡು ಬರುವುದಿಲ್ಲ. ಆದುದರಿಂದ ಏಕ ಸದಸ್ಯ ನ್ಯಾಯಪೀಠ ನೀಡಿದ ಆದೇಶ ನ್ಯಾಯ ಸಮ್ಮತವಾಗಿದೆ. ವರ್ಗಾವಣೆ ಹೊಂದಿದ್ದ ಸ್ಥಳದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ಆಪಾದಿತ ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸುವುದು ನೈಸರ್ಗಿಕ ತತ್ವಗಳಿಗೆ ವಿರುದ್ಧವಾಗಿದೆ. ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರದಲ್ಲಿ ಕೂಡ ಅರ್ಜಿದಾರರು ಧೂಳಿನ ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂಬ ಸತ್ಯ ಸಂಗತಿ ಕಂಡುಬರುತ್ತದೆ. ಆದುದರಿಂದ ರಿಟ್ ಅಪೀಲನ್ನು ತಿರಸ್ಕರಿಸಬೇಕಾಗಿ ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ವಿಭಾಗೀಯ ಪೀಠವು ಈ ಕೆಳಗಿನ ಕಾರಣಗಳಿಗೆ ರಿಟ್ ಮೇಲ್ಮನವಿಯನ್ನು ಪುರಸ್ಕರಿಸಿತು.





ನೌಕರರ ಸೇವಾ ಜೀವನದಲ್ಲಿ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದೆ. ವರ್ಗಾವಣೆ ಹೊಂದಿದ್ದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಲು ನೌಕರರು ಬದ್ಧರಾಗಿರತಕ್ಕದ್ದು. ವರ್ಗಾವಣೆ ಹೊಂದಿದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ರಜೆಯನ್ನು ಕೋರುವುದು ನ್ಯಾಯಶಾಸ್ತ್ರದಲ್ಲಿ ದುರ್ನಡತೆ ಎಂದು ಪರಿಗಣಿಸಲಾಗುತ್ತದೆ. ಸರಕಾರಿ ನೌಕರರು ಜನಪ್ರತಿನಿಧಿಗಳನ್ನು ಬಳಸಿ ರಾಜಕೀಯ ಪ್ರಭಾವವನ್ನು ಬೀರಿ ವರ್ಗಾವಣೆಯನ್ನು ರದ್ದುಪಡಿಸಲು ಪ್ರಯತ್ನಿಸುವುದು ಕೂಡ ನಡತೆ ನಿಯಮಗಳಡಿ ದುರ್ವರ್ತನೆ ಎಂದು ಪರಿಗಣಿಸಲ್ಪಡುತ್ತದೆ. 


ವರ್ಗಾವಣೆಗೊಂಡ ಸ್ಥಳದಲ್ಲಿ ತನ್ನ ಹುದ್ದೆಗೆ ದೀರ್ಘಾವಧಿಯ ಗೈರು ಹಾಜರಿಯನ್ನು ಸಮರ್ಥಿಸಲು ಉದ್ಯೋಗಿಯು ಅಲರ್ಜಿಯ ಕಾರಣ ನೀಡಿದ್ದಾರೆ. ಆದರೆ ವೈದ್ಯಕೀಯ ವರದಿಯು ಆಕೆಯ ಪ್ರಕರಣವನ್ನು ಬೆಂಬಲಿಸಿಲ್ಲ. ಆಕೆ ಸ್ವಲ್ಪ ಅಲರ್ಜಿಯಿಂದ ಬಳಲುತ್ತಿದ್ದರೂ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ನೆಲೆಯಲ್ಲಿ ರಜೆ ಪಡೆಯಲು ಯಾವುದೇ ಸಮರ್ಥನೀಯ ಕಾರಣಗಳಿಲ್ಲ ಎಂದು ವೈದ್ಯರು ನಿರ್ದಿಷ್ಟವಾಗಿ ಹೇಳಿದ್ದಾರೆ. 


ಈ ಅಂಶವನ್ನು ಸಕ್ರಮ ಪ್ರಾಧಿಕಾರವು ಪರಿಶೀಲಿಸಿದ ನಂತರ ಕಡ್ಡಾಯನಿವೃತ್ತಿಯ ದಂಡನೆಯನ್ನು ವಿಧಿಸಲಾಗಿದೆ. ಯಾವುದೇ ತೃಪ್ತಿಕರ ವಿವರಣೆ ಇಲ್ಲದ ಅನಧಿಕೃತ ಗೈರುಹಾಜರಿ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ. ದುರ್ನಡತೆಯು ಸಾಬೀತಾದಲ್ಲಿ ವೇತನ ಭಡ್ತಿಯನ್ನು ತಡೆಹಿಡಿಯುವ ಸಣ್ಣ ದಂಡನೆಯಿಂದ ಹಿಡಿದು ಸೇವೆಯಿಂದ ವಜಾಗೊಳಿಸುವ ವರೆಗಿನ ದಂಡನೆಯನ್ನು ವಿಧಿಸಬಹುದು ಎಂಬುದಾಗಿ ಪಂಜಾಬ್ ರಾಜ್ಯ ವಿರುದ್ಧ ಡಾ. ಪಿ. ಎಲ್. ಸಿಂಗ್ಲಾ ಲಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ನ್ಯಾಯ ಪೀಠವು ಉಲ್ಲೇಖಿಸಿತು.


ಎಸ್.ಸಿ.ಸಕ್ಸೇನಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.


ವರ್ಗಾವಣೆಯಾದ ಸ್ಥಳದಲ್ಲಿ ಮೊದಲು ಕರ್ತವ್ಯಕ್ಕೆ ವರದಿ ಮಾಡುವುದು ಸರಕಾರಿ ನೌಕರನ ಆದ್ಯ ಕರ್ತವ್ಯವಾಗಿದೆ. ವರ್ಗಾವಣೆ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ವರ್ಗಾವಣಾ ಆದೇಶವನ್ನು ಉಲ್ಲಂಘಿಸಿ ನ್ಯಾಯಾಲಯಕ್ಕೆ ಹೋಗುವುದು ಸಮರ್ಥನೀಯವಲ್ಲ. ಶಾಸನಾತ್ಮಕ ವಿನಾಯಿತಿಗಳನ್ನು ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ವರ್ಗಾವಣೆ ಆದೇಶವನ್ನು ನಿರ್ಲಕ್ಷಿಸುವುದು ದುರ್ನಡತೆಯಾಗಿದೆ. ವರ್ಗಾವಣೆಯನ್ನು ರದ್ದು ಪಡಿಸಲು ಚುನಾಯಿತ ಜನಪ್ರತಿನಿಧಿಗಳಿಂದ ಒತ್ತಡ ತರುವುದು ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನ್ಯಾಯಾಲಯದ ಕದ ತಟ್ಟುವ ವ್ಯಕ್ತಿಯು ಕಳಂಕಿತ ನಡವಳಿಕೆಯನ್ನು ಹೊಂದಿರಬಾರದು.


ಆಪಾದಿತ ನೌಕರರು ಶಿಸ್ತು ಪ್ರಾಧಿಕಾರದ ಆದೇಶದ ವಿರುದ್ಧ ಸಲ್ಲಿಸಿದ ಇಲಾಖಾ ಮೇಲ್ಮನವಿಯು ಅರ್ಹತೆಯ ಮೇಲೆ ವಿಫಲವಾಗಿದೆ. ಮೂಲಭೂತವಾಗಿ ದಂಡನೆಯನ್ನು ವಿಧಿಸುವುದು ಶಿಸ್ತು ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಸೇರಿದೆ. ಏಕ ಸದಸ್ಯ ನ್ಯಾಯ ಪೀಠದ ಆದೇಶ ಕಾನೂನಿನಡಿ ಊರ್ಜಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದ ವಿಭಾಗೀಯ ಪೀಠವು ಏಕ ಸದಸ್ಯ ನ್ಯಾಯ ಪೀಠದ ಆದೇಶವನ್ನು ರದ್ದುಪಡಿಸಿ ರಿಟ್ ಅಪೀಲ್ ಅನ್ನು ಪುರಸ್ಕರಿಸಿತು. ತತ್ಪರಿಣಾಮವಾಗಿ ಆಪಾದಿತ ನೌಕರರ ಕಡ್ಡಾಯ ನಿವೃತ್ತಿಯ ಆದೇಶವನ್ನು ಪುನರ್ ಊರ್ಜಿತಗೊಳಿಸಿತು.


ದಿನಾಂಕ 2.7.2024 ರಿಂದ 8 ವಾರಗಳ ಒಳಗೆ ಕಡ್ಡಾಯ ನಿವೃತ್ತಿಯ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಉದ್ಯೋಗಿಗೆ ಹಸ್ತಾಂತರಿಸಲು ಆದೇಶಿಸಿತು. ಆರ್ಥಿಕ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಆಕೆಯ ಖಾತೆಗೆ ಜಮಾ ಮಾಡಲು ವಿಫಲರಾದಲ್ಲಿ ನಿವೃತ್ತಿ ಸೌಲಭ್ಯಗಳ ಸಂಪೂರ್ಣ ಮೊತ್ತದ ಮೇಲೆ ಪ್ರತಿ ತಿಂಗಳು ಎರಡು ಶೇಕಡ ದರದಲ್ಲಿ ಬಡ್ಡಿಯನ್ನು ನೀಡುವಂತೆ ಆದೇಶಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ





Ads on article

Advertise in articles 1

advertising articles 2

Advertise under the article