ಬಿಗ್ ಬಾಸ್‌ಗೆ ವಕೀಲರ ಸಂಘದ ಖಡಕ್ ಎಚ್ಚರಿಕೆ: ಹೀಗೆ ಮಾಡಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ ಎಂದ ವಕೀಲರ ಸಂಘ
ಬಿಗ್ ಬಾಸ್‌ಗೆ ವಕೀಲರ ಸಂಘದ ಖಡಕ್ ಎಚ್ಚರಿಕೆ: ಹೀಗೆ ಮಾಡಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ ಎಂದ ವಕೀಲರ ಸಂಘ
ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಆರಂಭವಾಗಿರುವ ಬಹುಚರ್ಚಿತ 11ನೇ ಆವೃತ್ತಿಯ ಬಿಗ್ ಬಾಸ್‌ಗೆ ವಕೀಲರ ಸಂಘದ ಖಡಕ್ ಎಚ್ಚರಿಕೆ ನೀಡಿದೆ. ಬೆಂಗಳೂರು ವಕೀಲರ ಸಂಘದ ಎಚ್ಚರಿಕೆಯ ಕೇಂದ್ರ ಬಿಂದುವಾಗಿರುವುದು ಬಿಗ್ ಬಾಸ್ ಸ್ಪರ್ಧಿ ಕೆ.ಎನ್. ಜಗದೀಶ್ ಕುಮಾರ್.
ಬಿಗ್ ಬಾಸ್ ಸ್ಪರ್ಧಿ ಕೆ.ಎನ್. ಜಗದೀಶ್ ಕುಮಾರ್ ಅವರ ವಕೀಲಿಕೆಯ ಪರವಾನಿಗೆಯನ್ನು ದೆಹಲಿ ವಕೀಲರ ಪರಿಷತ್ ರದ್ದುಪಡಿಸಿದೆ. ವಕೀಲರ ಪರಿಷತ್ತಿನ ಈ ಆದೇಶವನ್ನು ಭಾರತೀಯ ವಕೀಲರ ಪರಿಷತ್ ಕೂಡ ಅನುಮೋದಿಸಿದೆ. ಹಾಗಾಗಿ, ಅವರು ಈಗ ವೃತ್ತಿಪರ ವಕೀಲರಲ್ಲ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ವಕೀಲರು ಅಥವಾ ವಕೀಲ್ ಸಾಬ್ ಎಂದು ಸಂಬೋಧಿಸಬಾರದು ಎಂದು ಬೆಂಗಳೂರು ವಕೀಲರ ಸಂಘ (ಬಿಬಿಎ) ತಾಕೀತು ಮಾಡಿದೆ.
ಈ ಬಗ್ಗೆ ಕನ್ನಡ ಕಲರ್ಸ್ ಚಾನೆಲ್‌ಗೆ ಮತ್ತು ಅದರ ಮುಖ್ಯಸ್ಥರಿಗೆ ವಕೀಲರ ಸಂಘ ಪತ್ರವೊಂದನ್ನು ಬರೆದಿದ್ದು, ಬಿಗ್ ಬಾಸ್ ಸ್ಪರ್ಧಿ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ವಕೀಲ ಅಥವಾ ವಕೀಲ್ ಸಾಬ್ ಎಂದು ಸಂಬೋಧಿಸಬಾರದು ಎಂದು ಮನವಿ ಮಾಡಿದೆ. ಈ ರೀತಿ ಸಂಬೋಧಿಸಿದರೆ ಅದು ವಕೀಲರ ಸಮುದಾಯಕ್ಕೆ ಅವಮಾನವಾಗುತ್ತದೆ. ಅಷ್ಟೇ ಅಲ್ಲದೆ, ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಬೆಂಗಳೂರು ವಕೀಲರ ಸಂಘ ಏಷ್ಯಾದಲ್ಲೇ ಅತಿ ದೊಡ್ಡ ವಕೀಲರ ಸಂಘವಾಗಿದ್ದು, 25 ಸಾವಿರ ಸದಸ್ಯರನ್ನು ಒಳಗೊಂಡಿದೆ. ಸಂಘವು ಸಮಾಜದಲ್ಲಿ ಘನತೆ ಮತ್ತು ಗೌರವ ಕಾಪಾಡಿಕೊಂಡು ಬಂದಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿ ಮಸಿ ಬಳಿಯಲು ಪ್ರಯತ್ನಿಸಿದರೆ ಅದನ್ನು ಸಹಿಸುವುದಿಲ್ಲ. ಅವರನ್ನು ವಕೀಲ್ ಸಾಬ್ ಎಂದು ಕರೆದರೆ ಅದು ಸಂಘದ ಸದಸ್ಯರಿಗೆ ನೋವು ತರುತ್ತದೆ. ಮತ್ತು ನಾವು ಈ ದಿಸೆಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ವಕೀಲರ ಸಂಘ ಎಚ್ಚರಿಕೆ ನೀಡಿದೆ.