ಬಿಎನ್ಎಸ್‌ಎಸ್ ಜಾರಿ ಬಳಿಕ ಸಿಆರ್‌ಪಿಸಿ ಅಡಿ ಕೇಸು ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್
ಬಿಎನ್ಎಸ್‌ಎಸ್ ಜಾರಿ ಬಳಿಕ ಸಿಆರ್‌ಪಿಸಿ ಅಡಿ ಕೇಸು ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್‌ಎಸ್) 2024ರ ಜುಲೈ 1ರಂದು ಜಾರಿಯಾಗಿದೆ. ಆ ದಿನದಿಂದ ದಾಖಲಾಗುವ ಎಲ್ಲ ದೂರುಗಳನ್ನು ಬಿಎನ್‌ಎಸ್‌ಎಸ್ ಅಡಿಯೇ ದಾಖಲಿಸಬೇಕು. ಬಿಎನ್‌ಎಸ್‌ಎಸ್ ಜಾರಿ ಬಳಿಕ ಸಿಆರ್‌ಪಿಸಿ ಅಡಿ ಕೇಸು ದಾಖಲಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ಕಲ್ಬುರ್ಗಿ ವಿಭಾಗೀಯ ಪೀಠದ ನ್ಯಾ. ಆರ್. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಅರುಣ್ ಕುಮಾರ್ ಎಂಬವರ ಮೇಲೆ ಸಿಆರ್‌ಪಿಸಿ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನ್ನು ರದ್ದುಪಡಿಸಿದೆ.
ಪತಿಯ ಸಾವಿನ ಬಳಿಕ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಲ್ಲದೆ ಸಾಕಷ್ಟು ಹಣ ಪಡೆದು ವಂಚನೆ ಮಾಡಿದ್ದ ಆರೋಪವನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಅರುಣ್ ಕುಮಾರ್ ಎದುರಿಸುತ್ತಿದ್ದಾರೆ.
ಆರೋಪಿ ವಿರುದ್ಧದ ಪ್ರಕರಣವನ್ನು ಬಿಎನ್‌ಎಸ್‌ಎಸ್ ಸೆಕ್ಷನ್ 173ರ ಅಡಿಯಲ್ಲಿ ದಾಖಲಿಸಿ ಸೆಕ್ಷನ್ 193ರ ಅಡಿಯಲ್ಲಿ ತನಿಖೆ ನಡೆಸಿ ಪೊಲೀಸರು ಅಂತಿಮ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
2024ರ ಜುಲೈ 1ಕ್ಕೂ ಮುಂಚೆ ಅಪರಾಧ ನಡೆದಿದ್ದರೆ ಮತ್ತು ಆ ದಿನದ ಬಳಿಕ FIR ದಾಖಲಿಸಿದ್ದರೆ ಅದನ್ನು ಇತರೆ ವಿಶೇಷ ಕಾನೂನುಗಳನ್ನು ಹೊರತುಪಡಿಸಿ ಬಿಎನ್‌ಎಸ್‌ಎಸ್ ಸೆಕ್ಷನ್ 173ರ ಅಡಿಯಲ್ಲಿ ದಾಖಲಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳನ್ನು ಅನ್ವಯಿಸಬೇಕು. ಅದರ ತನಿಖೆ ಮತ್ತು ಅಂತಿಮ ವರದಿಯನ್ನು ಬಿಎನ್‌ಎಸ್‌ಎಸ್ ಅಡಿಯೇ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಅರುಣ್ ಕುಮಾರ್ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್ ಕಲ್ಬುರ್ಗಿ ಪೀಠ, Crl.P. 200913/2024 Dated 30-09-2024