ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ: ನಿಯಾಮಾವಳಿ ರದ್ದುಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ: ನಿಯಾಮಾವಳಿ ರದ್ದುಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
ದೇಶದ ಯಾವುದೇ ಜೈಲುಗಳಲ್ಲಿ ಜಾತಿ ತಾರತಮ್ಯ ಎಸಗಿದರೆ ಅಂತಹ ಕ್ರಮವನ್ನು ಸಹಿಸಲಾಗದು ಎಂದು ಸುಪ್ರೀಂ ಕೋರ್ಟ್ ತ್ರಿ-ಸದಸ್ಯ ನ್ಯಾಯಪೀಠ ಐತಿಹಾಸಿಕ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ. ಜೆ. ಬಿ. ಪರ್ದೀವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ತ್ರಿ-ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಮಾಜದ ಅಂಚಿನ ಅಥವಾ ಕೆಳ ಸ್ಥರದ ಜಾತಿಗಳಿಗೆ ಸೇರಿದವರು ಎಂಬ ಕಾರಣಕ್ಕೆ ತುಳಿತಕ್ಕೆ ಒಳಗಾದ ಜಾತಿಗಳ ಕೈದಿಗಳನ್ನು ಕೀಳಾಗಿ ಕಾಣುವ ಹಾಗಿಲ್ಲ. ಅವರನ್ನು ಅವಮಾನ ಮಾಡುವ ಅಥವಾ ಅಂತಹ ಖೈದಿಗಳನ್ನು ಅಮಾನವೀಯ ಕೆಲಸದಲ್ಲಿ ತೊಡಗಿಸುವ ಹಾಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಮಾಜದ ಅಂದಿನ ಜಾತಿಯಿಂದ ಬಂದವರಿಗೆ ಸ್ವಚ್ಚತೆಯ ಕೆಲಸಗಳನ್ನು ವಹಿಸುವುದು ಮತ್ತು ಇದೇ ವೇಳೆ, ಉನ್ನತ ಜಾತಿಯವರನ್ನು ಅಡುಗೆ ಕಾರ್ಯಕ್ಕೆ ನಿಯೋಜಿಸುವುದು ಸಂವಿಧಾನದ 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಜಾತಿ ತಾರತಮ್ಯ ಮಾಡುವಂತಹ ಎಲ್ಲ ನಿಯಮಗಳನ್ನು ಅಸಂವಿಧಾನಿಕ ಎಂದು ಪರಿಗಣಿಸಲಾಗಿದೆ. ಈಗ ನೀಡುತ್ತಿರುವ ತೀರ್ಪಿನ ಪ್ರಕಾರ ಜೈಲುಗಳಲ್ಲಿ ಜಾರಿಯಲ್ಲಿ ಇರುವ ನಿಯಮಗಳಲ್ಲಿ ಸೂಕ್ತ ಬದಲಾವಣೆ ಮಾಡುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮೂರು ತಿಂಗಳ ಬಳಿಕ ತಾರತಮ್ಯ ತೊಡೆದುಹಾಕಲು ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಗಳು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತ್ರಿ ಸದಸ್ಯ ನ್ಯಾಯಪೀಠ ನಿರ್ದೇಶನ ನೀಡಿದೆ.
ಯಾವುದೇ ರೀತಿಯ ಜಾತಿ ತಾರತಮ್ಯ ಇರಲಿ. ಅದು ನೇರವಾಗಿ ಯಾ ಪರೋಕ್ಷವಾಗಿಯೂ ಇದ್ದಿರಬಹುದು. ಅಂತಹ ಜಾತಿ ತಾರತಮ್ಯವನ್ನು ತಡೆಯುವ ಹೊಣೆಗಾರಿಕೆ ಪ್ರಭುತ್ವದ್ದು. ಅಲ್ಲದೆ, ಕೈದಿಗಳ ಘನತೆಯನ್ನು ಪ್ರಭುತ್ವ ಕಾಪಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ನ್ಯಾಯಪೀಠ ತಾಕೀತು ಮಾಡಿದೆ.
ಉತ್ತರ ಪ್ರದೇಶದಲ್ಲಿ ಪ್ರಸಕ್ತ ಚಾಲ್ತಿಯಲ್ಲಿ ಇರುವ ಜೈಲು ಹ್ಯಾಂಡ್‌ಬುಕ್‌ನಲ್ಲಿ ಜಾತಿ ತಾರತಮ್ಯ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಯಾವುದೇ ಗುಂಪು ಮಲ ಹೊರುವ ಅಥವಾ ಕೀಳು ಕೆಲಸ ಮಾಡುವ ಗುಂಪಾಗಿ ಅಥವಾ ಕೀಳು ಕೆಲಸ ಮಾಡದೇ ಇರುವ ಸಮುದಾಯವಾಗಿ ಹುಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹರಿ ಅಥವಾ ಚಂಡಾಲ್ ಜಾತಿಗಳಿಗೆ ಸೇರಿದ ಖೈದಿಗಳನ್ನು ಕಸ ಗುಡಿಸುವುದುಕ್ಕೆ ಮತ್ತು ಸ್ವಚ್ಚತಾ ಕೆಲಸಕ್ಕೆ ನಿಯೋಜಿಸಬೇಕು ಎಂಬ ಜೈಲು ಕೈಪಿಡಿಯ ನಿಯಮಗಳನ್ನು ನ್ಯಾಯಪೀಠ ರದ್ದುಪಡಿಸಿತು. ಹಾಗೂ, ಜೈಲುಗಳಲ್ಲಿ ಇರುವ ಮಲದ ಗುಂಡಿಗಳನ್ನು ಶುಚಿಗೊಳಿಸುವ ಅಪಾಯಕಾರಿ ಕೆಲಸ ಮಾಡಲು ಕೈದಿಗಳನ್ನು ತೊಡಗಿಸಿಕೊಳ್ಳುವಂತಿಲ್ಲ ಎಂದು ಅದು ನುಡಿಯಿತು.
ಜೈಲು ಬ್ಯಾರಕ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ಇರುವ ಬಗ್ಗೆ ಪತ್ರಕರ್ತೆ ಸುಕನ್ಯಾ ಶಾಂತಾ ವಿಸ್ತೃತವಾದ ವರದಿಗಳನ್ನು ಮಾಡಿದ್ದರು. ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣ: ಸುಕನ್ಯಾ ಶಾಂತಾ Vs ಭಾರತ ಸರ್ಕಾರ (ಸುಪ್ರೀಂ ಕೋರ್ಟ್)