
ಪೊಲೀಸ್ ಠಾಣೆಯ ಪ್ರತಿ ಕೋಣೆಯಲ್ಲೂ ಸಿಸಿಟಿವಿ ಕ್ಯಾಮರಾ ಕಡ್ಡಾಯ: ಹೈಕೋರ್ಟ್
ಪೊಲೀಸ್ ಠಾಣೆಯ ಪ್ರತಿ ಕೋಣೆಯಲ್ಲೂ ಸಿಸಿಟಿವಿ ಕ್ಯಾಮರಾ ಕಡ್ಡಾಯ: ಹೈಕೋರ್ಟ್
ಪ್ರತಿಯೊಂದು ಪೊಲೀಸ್ ಠಾಣೆಯ ಎಲ್ಲ ಕೋಣೆಗಳಲ್ಲೂ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.
ಪೊಲೀಸರಿಂದ ಮಾರಕವಾಗಿ ಥಳಿತಕ್ಕೆ ಒಳಗಾಗುವ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ.ಎಸ್. ಅಹ್ಲುವಾಲಿಯಾ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಉತ್ತಮ ಗುಣಮಟ್ಟದ ಆಡಿಯೋ ರೆಕಾರ್ಡಿಂಗ್ ಸಹಿತ ಅಳವಡಿಕೆ ಮಾಡಬೇಕು. ಈ ಸಿಸಿಟಿವಿ ವ್ಯವಸ್ಥೆಯಲ್ಲಿ ಕನಿಷ್ಟ ಮೂರು ತಿಂಗಳ ಅವಧಿಯ ವೀಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿರಬೇಕು ಎಂದು ಹೈಕೋರ್ಟ್ ನ್ಯಾಯಪೀಠ ತಾಕೀತು ಮಾಡಿದೆ.
ಪ್ರಕರಣದಲ್ಲಿ ಪೊಲೀಸರು ವ್ಯಕ್ತಿಗೆ ಥಳಿಸಿರುವ ಘಟನೆ ನಡೆಸಿದಿರುವುದು ದೃಢಪಟ್ಟಿದೆ. ಆದರೆ, ಸಿಸಿಟಿವಿ ಅಳವಡಿಸದೇ ಇರುವ ಕೋಣೆಯಲ್ಲಿ ಪೊಲೀಸರು ಈ ಕೃತ್ಯ ಎಸಗಿದ್ದಾರೆ ಎಂದು ಅರ್ಜಿದಾರರು ದೂರು ನೀಡಿದ್ದಾರೆ.
ಪೊಲೀಸರು ತಮ್ಮ ಕೃತ್ಯಕ್ಕೆ ಸಿಸಿಟಿವಿ ಇಲ್ಲದ ಕೋಣೆಗಳನ್ನು ಬಳಸುವುದು ತಪ್ಪು. ಇನ್ನು ಮುಂದೆ ಎಲ್ಲ ಕೋಣೆಗಳಿಗೆ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಬೇಕು. ಇದಕ್ಕೆ ಮಧ್ಯಪ್ರದೇಶ ಪೊಲೀಸ್ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಬೇಕು. ಈಗಾಗಲೇ ಸಿಸಿಟಿವಿ ಅಳವಡಿಕೆಯಾಗಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಒಂದು ತಿಂಗಳಲ್ಲಿ ವರದಿ ತರಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.