ವಂಚನೆಯ ಉದ್ದೇಶ ಇಲ್ಲದ ಸಂಬಂಧವು ಲೈಂಗಿಕ ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು
ವಂಚನೆಯ ಉದ್ದೇಶ ಇಲ್ಲದ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು
ಆರಂಭದಿಂದಲೂ ವಂಚನೆಯ ಉದ್ದೇಶ ಇಲ್ಲದೇ ಇದ್ದರೆ, ಸಹಮತದ ಆಧಾರದ ವಿವಾಹೇತರ ದೈಹಿಕ ಸಂಬಂಧವು ಅತ್ಯಾಚಾರವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಶ್ರೇಯ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ಅನೀಶ್ ಕುಮಾರ್ ಗುಪ್ತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ತನ್ನ ಪತಿಯ ಮರಣದ ನಂತರ, ಮದುವೆ ಆಗುವ ಭರವಸೆ ನೀಡಿ ಶ್ರೇಯ್ ಅವರು ತನ್ನ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಸಂತ್ರಸ್ತ ಮಹಿಳೆ ಮೊರದಾಬಾದ್‌ನಲ್ಲಿ ದೂರು ದಾಖಲಿಸಿದ್ದರು. ಮದುವೆಯಾಗುವುದಾಗಿ ಮತ್ತೆ ಮತ್ತೆ ಭರವಸೆ ನೀಡಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದರು. ಆ ಬಳಿಕ ಮಾತಿಗೆ ತಪ್ಪಿದ ಶ್ರೇಯ್ ಬೇರೊಬ್ಬ ಮಹಿಳೆಯ ಜೊತೆಗೆ ಮದುವೆಯಾಗಿದ್ದಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ದೂರಿದ್ದರು.
ತನಗೆ 50 ಲಕ್ಷ ರೂ. ನೀಡದೇ ಇದ್ದರೆ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಶ್ರೇಯ್ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಶ್ರೇಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರು ನೀಡಿರುವ ಮಹಿಳೆಯು ವಿಧವೆ. ಆರೋಪಿ ಶ್ರೇಯ್ ಅವರು 12-13 ವರ್ಷಗಳಿಂದ ಆ ಮಹಿಳೆಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದಾರೆ. ಮಹಿಳೆಯ ಪತಿ ಬದುಕಿದ್ದಾಗಲೂ ಶ್ರೇಯ್ ಅವರು ಮಹಿಳೆಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದರು ಎಂಬುದನ್ನು ಕೋರ್ಟ್ ಗಮನಿಸಿತು.
'ನಯೀಂ ಅಹಮದ್ Vs ಹರಿಯಾಣ ಸರ್ಕಾರ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಪೊಲೀಸರು ಹಾಕಿದ್ದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿತು.
ಮದುವೆ ಆಗುವುದಾಗಿ ಭರವಸೆ ನೀಡಿ, ನಂತರ ಅದನ್ನು ಉಳಿಸಿಕೊಳ್ಳಲಾಗದ ಪ್ರತೀ ಪ್ರಕರಣವನ್ನೂ ಸುಳ್ಳು ಭರವಸೆ ಎಂದು ಪರಿಗಣಿಸಿ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸುವುದು ವಿವೇಕದ ಕೆಲಸ ಆಗುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿತು.