ಮತ್ತೊಂದು 'ಸರ್ಕಾರಿ ನೌಕರರ ಸಂಘ'ದ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ: ಬೈಲಾ ಉಲ್ಲಂಘಿಸಿದ ಸಂಘದ ಚುನಾವಣೆಗೆ ಹಿನ್ನಡೆ
ಮತ್ತೊಂದು 'ಸರ್ಕಾರಿ ನೌಕರರ ಸಂಘ'ದ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ: ಬೈಲಾ ಉಲ್ಲಂಘಿಸಿದ ಸಂಘದ ಚುನಾವಣೆಗೆ ಹಿನ್ನಡೆ
ಬೈಲಾ ಉಲ್ಲಂಘಿಸಿ ಮತಕ್ಷೇತ್ರ ವಿಲೀನ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನಂಜನಗೂಡು ತಾಲೂಕು ಶಾಖೆಯ ಚುನಾವಣೆಗೆ ಹಿರಿಯ ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿ ಎರಡು ಇಲಾಖೆಯ ಮತ ಕ್ಷೇತ್ರಗಳನ್ನು ವಿಲೀನಗೊಳಿಸಿ ಮತದಾರರ ಪಟ್ಟಿಯನ್ನು ತಯಾರಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ದಾವೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂಬುದು ಕಂಡು ಬಂದಿರುವುದರಿಂದ ದಿನಾಂಕ 28.10.2024 ರಂದು ನಡೆಯಬೇಕಿದ್ದ ನಂಜನಗೂಡು ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನಂಜನಗೂಡಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ದಿನಾಂಕ 25.10.2024 ರಂದು ತಡೆಯಾಜ್ಞೆ ನೀಡಿದೆ. ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಉದ್ಯೋಗಿಗಳ ರಾಜ್ಯ ವಿಮಾ ಇಲಾಖೆಯಲ್ಲಿ (ಇ.ಎಸ್‌ಐ.) ಸೇವೆ ಸಲ್ಲಿಸುತ್ತಿರುವ ಶ್ರೀ ಎನ್. ಹರೀಶ್ ಕುಮಾರ್ ಎಂಬವರು ಕಳೆದ 2013-2018 ಹಾಗೂ 2019-2024 ರ ಸಾಲಿನಲ್ಲಿ ಇ.ಎಸ್.ಐ ಇಲಾಖೆ ಮತಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಅಂದರೆ 2024-2029 ನಡೆಯಲಿರುವ ಚುನಾವಣೆಯಲ್ಲಿ ಇ.ಎಸ್.ಐ. ಇಲಾಖೆ ಮತಕ್ಷೇತ್ರವನ್ನು ತೆಗೆದು ಹಾಕಿ, ಅವೈಜ್ಞಾನಿಕವಾಗಿ ಆರೋಗ್ಯ ಇಲಾಖೆಯ ಮತದಾರರ ಪಟ್ಟಿಗೆ ಸೇರಿಸಲಾಗಿತ್ತು.
ಇ.ಎಸ್.ಐ ಇಲಾಖೆ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ಆರೋಗ್ಯ ಇಲಾಖೆಗೂ ಇ.ಎಸ್.ಐ. ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ನಿಯಮಾವಳಿ ಪ್ರಕಾರ ಪ್ರಾತಿನಿಧ್ಯ ನೀಡದ ಇಲಾಖೆಗಳಿಗೆ ಮೂರು ಮತಕ್ಷೇತ್ರಗಳು ಮೀಸಲಿದ್ದು, ಆ ಮತಕ್ಷೇತ್ರಗಳಲ್ಲಿಯೂ ಸಹ ಇ.ಎಸ್.ಐ ಇಲಾಖೆಗೆ ಪ್ರಾತಿನಿಧ್ಯ ನೀಡದೆ ವಂಚಿಸಲಾಗಿದೆ ಎಂದು ಶ್ರೀ ಎನ್ ಹರೀಶ್ ಕುಮಾರ್ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.
ಶ್ರೀ ಹರೀಶ್ ಕುಮಾರ್ ಅವರು ಸಲ್ಲಿಸಿದ ಈ ಆಕ್ಷೇಪಣೆಯನ್ನು ಲೆಕ್ಕಿಸದೇ ಈಗಾಗಲೇ ಪ್ರಾತಿನಿಧ್ಯ ನೀಡಿರುವ ಇಲಾಖೆಗಳಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡಿ, ಇ.ಎಸ್.ಐ. ಇಲಾಖೆಗೆ ಮತ ಕ್ಷೇತ್ರವನ್ನು ಹಂಚದೆ ಬೈಲಾವನ್ನು ಉಲ್ಲಂಘನೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಕ್ಟೋಬರ್ 28 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಂಜನಗೂಡು ಶಾಖೆಯ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ವಾದಿ ಶ್ರೀ ಎನ್.ಹರೀಶ್ ಕುಮಾರ್ ಅವರು ನಂಜನಗೂಡಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ವಾದಿ ಪರ ವಕೀಲರ ವಾದವನ್ನು ಆಲಿಸಿದ ನಂಜನಗೂಡಿನ ಹಿರಿಯ ಸಿವಿಲ್ ನ್ಯಾಯಾಲಯವು ಸಂಘದ ಬೈಲಾಗೆ ವಿರುದ್ಧವಾಗಿ 2 ಮತ ಕ್ಷೇತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಲೀನಗೊಳಿಸಲಾದ ಮೇಲ್ನೋಟಕ್ಕೆ ಕಂಡುಬರುವ ವ್ಯತ್ಯಾಸವನ್ನು ಪರಿಗಣಿಸಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ದಿನಾಂಕ 28.10.2024ರಂದು ನಡೆಯಲಿರುವ ನಂಜನಗೂಡು ತಾಲೂಕು ಶಾಖೆಯ ಚುನಾವಣೆಗೆ ತಡೆಯಾಜ್ಞೆ ನೀಡಿದೆ.
ದಿನಾಂಕ 28.10.2024 ರಂದು ರಾಜ್ಯಾದ್ಯಂತ ಎಲ್ಲಾ ತಾಲೂಕು ಶಾಖೆಗಳಿಗೆ ಚುನಾವಣೆ ನಡೆಯಲಿದೆ ದಿನಾಂಕ 16.11.2024ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಶಾಖೆಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ಅಕ್ರಮ ನಡೆದಿರುವ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ರಾಜ್ಯ ಸರಕಾರವು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ದಿನಾಂಕ 7.10.2024 ರಂದು ಆದೇಶ ಹೊರಡಿಸಿತ್ತು.
ಆಡಳಿತಾಧಿಕಾರಿ ನೇಮಕದ ಕುರಿತು ಸಲ್ಲಿಸಲಾದ ರಿಟ್ ಪ್ರಕರಣದ ವಿಚಾರಣೆ ದಿನಾಂಕ 28.10.2024ರಂದು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ನಡೆಯಲಿದೆ.