ಭಾರತ್ ಮಾತಾ ಕಿ ಜೈ ಸಾಮರಸ್ಯ ಉತ್ತೇಜಿಸುವ ಘೋಷಣೆ: ಕರ್ನಾಟಕ ಹೈಕೋರ್ಟ್
ಭಾರತ್ ಮಾತಾ ಕಿ ಜೈ ಸಾಮರಸ್ಯ ಉತ್ತೇಜಿಸುವ ಘೋಷಣೆ: ಕರ್ನಾಟಕ ಹೈಕೋರ್ಟ್
"ಭಾರತ್ ಮಾತಾ ಕಿ ಜೈ" ಎಂಬುದು ಧರ್ಮಗಳ ನಡುವೆ ದ್ವೇಷ ಹರಡುವ ಘೋಷಣೆಯಲ್ಲ. ಇದು ಸಾಮರಸ್ಯ ಉತ್ತೇಜಿಸುವ ಘೋಷಣೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಂಗಳೂರಿನ ಸುರೇಶ್ ಸಹಿತ ಐವರು ಹಿಂದೂ ಪರ ಸಂಘಟನೆಗೆ ಸೇರಿದ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸಿದೆ.
ಘಟನೆಯ ವಿವರ:
2024ರಂದು ಜೂನ್ 9ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ನಡೆಸಿದ ಬಳಿಕ ಕಾರ್ಯಕರ್ತರು ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರು "ಭಾರತ್ ಮಾತಾ ಕಿ ಜೈ" ಎಂಬ ಘೋಷಣೆ ಹಾಕುತ್ತಾ ಸಾಗುತ್ತಿದ್ದರು. ಇದಕ್ಕೆ 25 ಮಂದಿಯ ಗುಂಪೊಂದು ಆಕ್ಷೇಪ ಮಾಡಿತ್ತು. ಈ ಸಂದರ್ಭದಲ್ಲಿ ಅರ್ಜಿದಾರರಿಗೆ ಹರಿತವಾದ ಚಾಕು ಮೂಲಕ ಇರಿಯಲಾಗಿತ್ತು. ಈ ಬಗ್ಗೆ ಅರ್ಜಿದಾರರು ದೂರು ದಾಖಲಿಸಿದ್ದರು.
ಮರುದಿನ ಪಿ.ಕೆ. ಅಬ್ದುಲ್ಲ ಎಂಬವರು ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿ ಐವರು ಹಿಂದೂ ಪರ ಸಂಘಟನೆಗೆ ಸೇರಿದ ಕಾರ್ಯಕರ್ತರು ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಎರಡು ಧರ್ಮಗಳ ನಡುವೆ ದ್ವೇಷ ಹರಡಿದ ಆರೋಪದ ಅಡಿಯಲ್ಲಿ ಈ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರು ಹೂಡಿದ ಪ್ರಕರಣಕ್ಕೆ ಪ್ರತಿಯಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಸೆಕ್ಷನ್ 153 'ಎ' ಗೆ ಅನ್ವಯವಾಗುವ ಯಾವುದೇ ಅಂಶವಿಲ್ಲ ಎಂದು ಹೇಳಿತು.
ನಿಜವಾಗಿ, ಧರ್ಮ ಮತ್ತು ಭಾಷೆ ಸೇರಿದಂತೆ ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಐಪಿಸಿ ಸೆಕ್ಷನ್ 153 ದುರ್ಬಳಕೆಗೆ ಈ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಕಾರ್ಯಕರ್ತರು "ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಹಾಕಿದ್ದಾರೆ. ಪ್ರಧಾನ ಮಂತ್ರಿಯನ್ನು ಹೊಗಳಿದ್ದಾರೆ. ದ್ವೇಷ ಹರಡಿದ ಯಾ ಹರಡುವ ಅಂಶವು ದೂರಿನಲ್ಲಿ ಎಲ್ಲೂ ಪ್ರತಿಫಲಿಸುತ್ತಿಲ್ಲ.
"ಭಾರತ್ ಮಾತಾ ಕಿ ಜೈ" ಎಂಬ ಘೋಷನೆ ಹಾಕಿದರೆ ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತೀರ್ಪು ನೀಡಿತು.