ರಸ್ತೆ ಅಪಘಾತ: ವಾಹನದ ಆರ್‌ಸಿ, ಫಿಟ್ನೆಸ್ ಇಲ್ಲದಿದ್ದರೂ ಪರಿಹಾರಕ್ಕೆ ವಿಮಾ ಕಂಪೆನಿ ಹೊಣೆ- ಕರ್ನಾಟಕ ಹೈಕೋರ್ಟ್
ರಸ್ತೆ ಅಪಘಾತ: ವಾಹನದ ಆರ್‌ಸಿ, ಫಿಟ್ನೆಸ್ ಇಲ್ಲದಿದ್ದರೂ ಪರಿಹಾರಕ್ಕೆ ವಿಮಾ ಕಂಪೆನಿ ಹೊಣೆ- ಕರ್ನಾಟಕ ಹೈಕೋರ್ಟ್
ಅಪಘಾತದ ವೇಳೆ, ವಾಹನದ ಪರವಾನಗಿ ಮತ್ತು ಕ್ಷಮತಾ ಪ್ರಮಾಣ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ಇಲ್ಲದೇ ಇದ್ದರೂ ವಿಮಾನ ಕಂಪೆನಿಯು ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ತಮ್ಮ ವಿರುದ್ಧದ ತೀರ್ಪನ್ನು ರದ್ದುಗೊಳಿಸಬೇಕು ಎಂದು ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪೆನಿ ಮತ್ತು ಹೆಚ್ಚಿನ ಪರಿಹಾರ ಕೋರಿ ಅರ್ಜಿದಾರರು ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಅಪಘಾತಕ್ಕೆ ಒಳಗಾದ ವಾಹನಕ್ಕೆ ಫಿಟ್‌ನೆಸ್ ಇಲ್ಲದಿದ್ದರೂ ನ್ಯಾಯಮಂಡಳಿ ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ಇದು ಸರಿಯಲ್ಲ. ಹಾಗಾಗಿ ತೀರ್ಪನ್ನು ಬದಿಗಿರಿಸಿ ವಿಮಾ ಕಂಪೆನಿ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ವಿಮಾ ಕಂಪೆನಿ ವಾದಿಸಿತ್ತು.
ವಾಹನದ ಮಾಲೀಕರು ತಮ್ಮ ವಾಹನವನ್ನು ರಸ್ತೆಗೆ ಇಳಿಸುವಾಗ ಲೈಸನ್ಸ್ ಮತ್ತು ಫಿಟ್‌ನೆಸ್ ಸರ್ಟಿಫಿಕೇಟ್ ಹೊಂದಿರಲಿಲ್ಲ. ಇದು ವಾಹನ ಮಾಲೀಕರು ಅನುಸರಿಸಬೇಕಾಗಿದ್ದ ಮೂಲಭೂತ ನಿಯಮ. ಆದರೆ, ಈ ಪ್ರಕರಣದಲ್ಲಿ ಇದನ್ನು ಉಲ್ಲಂಘಿಸಲಾಗಿದೆ.
ಈ ಕಾರಣದಿಂದ ವಿಮಾ ಕಂಪೆನಿ ಪರಿಹಾರ ನೀಡಲು ಅರ್ಹವಲ್ಲ. ವಿಮಾ ಕಂಪೆನಿಯನ್ನು ಪರಿಹಾರ ನೀಡಬೇಕಾದ ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಮತ್ತು ವಾಹನ ಮಾಲೀಕರೇ ಪರಿಹಾರ ನೀಡಲು ನಿರ್ದೇಶನ ನೀಡಬೇಕು ಎಂದು ವಿಮಾ ಕಂಪೆನಿ ಪರ ವಕೀಲರು ವಾದಿಸಿದರು.
ಇದೇ ವೇಳೆ, ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು ಎಂದು ಮೃತ ಸಂತ್ರಸ್ತರ ಪತ್ನಿ ಕೋರಿಕೆ ಸಲ್ಲಿಸಿದ್ದರು.
ಉಭಯ ಪಕ್ಷಕಾರರ ಪರವಾಗಿ ಮಾಡಲಾದ ವಾದವನ್ನು ಆಲಿಸಿದ ನ್ಯಾಯಪೀಠ, ಸಂತ್ರಸ್ತರ ಪರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿತು. ಪರಿಹಾರದ ಮೊತ್ತವನ್ನು 13.44 ಲಕ್ಷ ರೂಗಳಿಂದ 13.88 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿತು. ಶೇಕಡಾ 6ರಷ್ಟು ಬಡ್ಡಿ ಸೇರಿಸಿ ಪಾವತಿ ಮಾಡುವಂತೆ ಆದೇಶ ಹೊರಡಿಸಿತು.
ಇದೇ ವೇಳೆ, ವಿಮಾ ಕಂಪೆನಿಯ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಪರಿಹಾರದ ಮೊತ್ತವನ್ನು ನೀಡುವ ಜವಾಬ್ದಾರಿಯಿಂದ ವಿಮಾ ಕಂಪೆನಿ ನುಣುಚಿಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿತು.
ಸ್ವರಣ್ ಸಿಂಗ್ Vs ಯಲ್ಲವ್ವ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉದ್ದರಿಸಿದ ನ್ಯಾಯಪೀಠ, ಮೂಲಭೂತ ನಿಯಮದ ಉಲ್ಲಂಘನೆ ಆಗಿದ್ದರೂ ವಿಮಾ ಕಂಪೆನಿಯೇ ಪರಿಹಾರ ನೀಡುವ ಹೊಣೆಗಾರಿಕೆ ಹೊಂದಿದೆ ಎಂದು ತೀರ್ಪು ನೀಡಿತು. ಆದ್ದರಿಂದ ಆದೇಶ ತಲುಪಿದ ಎಂಟು ವಾರಗಳ ಒಳಗಾಗಿ ಸಂಪೂರ್ಣ ವಿಮಾ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತು.