-->
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆಗೆ ಅರ್ಜಿ: ಸುಪ್ರೀಂ ಕೋರ್ಟ್ ಕೆಂಡಾಮಂಡಲ, ಅರ್ಜಿ ವಾಪಸ್ ಪಡೆದ ವಕೀಲ !

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆಗೆ ಅರ್ಜಿ: ಸುಪ್ರೀಂ ಕೋರ್ಟ್ ಕೆಂಡಾಮಂಡಲ, ಅರ್ಜಿ ವಾಪಸ್ ಪಡೆದ ವಕೀಲ !

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆಗೆ ಅರ್ಜಿ: ಸುಪ್ರೀಂ ಕೋರ್ಟ್ ಕೆಂಡಾಮಂಡಲ, ಅರ್ಜಿ ವಾಪಸ್ ಪಡೆದ ವಕೀಲ !





ಮೂರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದ ವಕೀಲರೊಬ್ಬರ ಅರ್ಜಿಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ಸುಪ್ರೀಂ ನ್ಯಾಯಪೀಠದ ಆಕ್ರೋಶಕ್ಕೆ ತುತ್ತಾದ ಬಳಿಕ ವಕೀಲರು ತಮ್ಮ ಅರ್ಜಿಯನ್ನು ವಿಚಾರಣೆಯಿಂದ ವಾಪಸ್ ಪಡೆದುಕೊಂಡಿದ್ದಾರೆ.


ವಕೀಲ ವಿಶಾಲ್ ಅರುಣ್ ಮಿಶ್ರಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ್ ಓಕಾ, ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲ ಮತ್ತು ನ್ಯಾ. ಆಗಸ್ಟಿನ್ ಮಸೀಹ್ ಅವರಿದ್ದ ನ್ಯಾಯಪೀಠ, ಮನವಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.


ಅರ್ಜಿಯಲ್ಲಿ ಎಲ್ಲ ಖಾಶಗಿ ಪಕ್ಷಕಾರರ ವಿರುದ್ಧ ಆಪಾದನೆಗಳನ್ನು ಮಾಡಲಾಗಿದೆ. ಮತ್ತು ನ್ಯಾಯಮೂರ್ತಿಗಳ ಮೇಲೆ ಸಂಶಯದ ನೋಟ ಬೀರಲಾಗಿದೆ. ಇದರ ಅಗತ್ಯವೇನು..? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಈ ಅರ್ಜಿಯನ್ನು ಸಲ್ಲಿಸಿರುವ ರೀತಿಯೇ ಆಕ್ಷೇಪಾರ್ಹವಾಗಿದೆ ಎಂದು ಕಟುವಾದ ಶಬ್ದಗಳಿಂದ ನುಡಿಯಿತು.


ಈ ಮನವಿ ಅರ್ಜಿಯು ಕುಟಿಲತೆಯಿಂದ ಕೂಡಿದೆ. ಮತ್ತು ಅರ್ಜಿಯನ್ನು ಸಲ್ಲಿಸುವುದರ ಹಿಂದೆ ಯಾರದೋ ದುಷ್ಪ್ರೇರಣೆ ಅಡಗಿದಂತೆ ಭಾಸವಾಗುತ್ತಿದೆ ಎಂದು ನ್ಯಾಯಪೀಠ ವಕೀಲರನ್ನು ಪ್ರಶ್ನಿಸಿತು.


ನಿಮ್ಮ ಪ್ರಕಾರ, ನ್ಯಾಯಮೂರ್ತಿಗಳು ದುರ್ಬಲರೇ..? ನ್ಯಾಯಾಂಗದ ಫಲಿತಾಂಶಗಳ ಮೇಲೆ ಲೋಕಾಯುಕ್ತರು ಪ್ರಭಾವ ಬೀರಬಹುದು ಎಂದು ಭಾವಿಸಿದ್ದೀರಾ..? ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲರನ್ನು ಪ್ರಶ್ನಿಸಿತು.


ಗೌರವಾನ್ವಿತ ನ್ಯಾಯಮೂರ್ತಿಗಳು ಸಂಜೆ ಏಳು ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಾರೆ. ನೀವು ಅದರ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಓಕಾ ಅಸಮಾಧಾನ ವ್ಯಕ್ತಪಡಿಸಿದರು.


ಹೈಕೋರ್ಟ್ ನ್ಯಾಯಮೂರ್ತಿಗಳ ವಿವೇಚನೆ ಬಗ್ಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ನುಡಿಯಿತು. ಅರ್ಜಿಯಲ್ಲಿ ನಮೂದಿಸಿದ ಅಂಶಗಳ ಬಗ್ಗೆ ನ್ಯಾಯಪೀಠಕ್ಕೆ ಮೇಲ್ನೋಟಕ್ಕೆ ತೃಪ್ತಿಯಿಲ್ಲ ಎಂಬುದನ್ನು ನ್ಯಾಯಪೀಠದಲ್ಲಿ ಓರ್ವ ಸದಸ್ಯರಾಗಿದ್ದ ಅಮಾನುಲ್ಲ ಅಭಿಪ್ರಾಯಪಟ್ಟರು.


ನಿಮ್ಮ ಬಳಿ ಕೆಲವು ದೊಡ್ಡ ಆಧಾರಗಳು ಇರಬಹುದು. ಆದರೆ, ಮಾನ್ಯ ನ್ಯಾಯಮೂರ್ತಿಗಳ ವಿವೇಚನೆಯನ್ನು ನಾವು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಕಟು ಶಬ್ದಗಳಿಂದ ನುಡಿದ ಬಳಿಕ ಅರ್ಜಿದಾರರು ತಮ್ಮ ಮನವಿಯನ್ನು ಹಿಂದಕ್ಕೆ ಪಡೆಯಲು ನ್ಯಾಯಾಲಯದ ಅನುಮತಿಯನ್ನು ಯಾಚಿಸಿದರು.


ಈ ಅರ್ಜಿಯನ್ನು ವಾಪಸ್ ಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಲಾಯಿತಾದರೂ, ಅರ್ಜಿಯಲ್ಲಿ ಗಂಭೀರ ಪ್ರಮಾಣದ ಮತ್ತು ಆಕ್ಷೇಪಯುಕ್ತ ಅಂಶಗಳು ಒಳಗೊಂಡಿದೆ ಎಂಬುದನ್ನು ವಕೀಲರಿಗೆ ತಿಳಿಸಿತು. ಇದೇ ವೇಳೆ, ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯುವ ಕುರಿತು ಮಾರ್ಗಸೂಚಿಯನ್ನು ರೂಪಿಸುವುದು ಸೂಕ್ತವೇ ಎಂಬ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.



ಪ್ರಕರಣ ಚಂದ್ರಪ್ರಭಾ ಮತ್ತಿತರರು Vs ಭಾರತ ಒಕ್ಕೂಟ (ಸುಪ್ರೀಂ ಕೋರ್ಟ್‌ ತ್ರಿ ಸದಸ್ಯ ಪೀಠ)

Ads on article

Advertise in articles 1

advertising articles 2

Advertise under the article