![ನ್ಯಾಯಮೂರ್ತಿಯ ಕೆಲಸ ಮಾತ್ರ ನಿಭಾಯಿಸುವೆ: ಗತಿಸಿದ್ದು ಮುಗಿದ ಅಧ್ಯಾಯ, ಹಿನ್ನಡೆಯಲ್ಲ- ಹೈಕೋರ್ಟ್ ನ್ಯಾ. ಶ್ರೀಶಾನಂದ ನ್ಯಾಯಮೂರ್ತಿಯ ಕೆಲಸ ಮಾತ್ರ ನಿಭಾಯಿಸುವೆ: ಗತಿಸಿದ್ದು ಮುಗಿದ ಅಧ್ಯಾಯ, ಹಿನ್ನಡೆಯಲ್ಲ- ಹೈಕೋರ್ಟ್ ನ್ಯಾ. ಶ್ರೀಶಾನಂದ](https://blogger.googleusercontent.com/img/b/R29vZ2xl/AVvXsEgDHx-xT90lVWDNnZRQgP1-4ctghJPeMXACmByy418ALbm9YGnI9C-CUcRTiyNa5UsgEFmL1NEOTCbOEDmR1Bk6H7wi484rvF2GCcET9x4c0UVhl2arR8AWlcDydPexZrQuDA2vFTkZ7PN8PqGY6AjV5-EXHixu0ul7og5i5f6_fQGUH3rbzivTgXHwXmIq/w640-h362/Karnataka%20High%20Court.jpg)
ನ್ಯಾಯಮೂರ್ತಿಯ ಕೆಲಸ ಮಾತ್ರ ನಿಭಾಯಿಸುವೆ: ಗತಿಸಿದ್ದು ಮುಗಿದ ಅಧ್ಯಾಯ, ಹಿನ್ನಡೆಯಲ್ಲ- ಹೈಕೋರ್ಟ್ ನ್ಯಾ. ಶ್ರೀಶಾನಂದ
ನ್ಯಾಯಮೂರ್ತಿಯ ಕೆಲಸ ಮಾತ್ರ ನಿಭಾಯಿಸುವೆ: ಗತಿಸಿದ್ದು ಮುಗಿದ ಅಧ್ಯಾಯ, ಹಿನ್ನಡೆಯಲ್ಲ- ಹೈಕೋರ್ಟ್ ನ್ಯಾ. ಶ್ರೀಶಾನಂದ
ನಾನು ಹೈಕೋರ್ಟ್ ನ್ಯಾಯಪೀಠದಲ್ಲಿ ಇದ್ದು ನ್ಯಾಯಮೂರ್ತಿಯ ಕೆಲಸ ಮಾತ್ರ ನಿಭಾಯಿಸುತ್ತೇನೆ. ಕಳೆದುಹೋದದ್ದು ಈಗ ಮುಗಿದ ಅಧ್ಯಾಯ. ಅದನ್ನು ಹಿನ್ನಡೆ ಎಂದು ನಾನು ಪರಿಗಣಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನ್ಯಾ. ಶ್ರೀಶಾನಂದ ಹೇಳಿದ್ದಾರೆ.
ರಜಾಕಾಲೀನ ಏಕಸದಸ್ಯ ನ್ಯಾಯಪೀಠದಲ್ಲಿ ಆಸೀನರಾಗಿದ್ದ ನ್ಯಾ. ಶ್ರೀಶಾನಂದ ಅವರ ಮುಂದೆ ವಿಚಾರಣೆಯಲ್ಲಿ ವಾದ ಮಂಡಿಸಿದ ಬಳಿಕ ಕೊನೆಯಲ್ಲಿ ವಕೀಲರೊಬ್ಬರು, ಹಿಂದಿನ ಘಟನೆಯನ್ನು ನ್ಯಾಯಮೂರ್ತಿಗಳು ಹಿನ್ನಡೆ ಎಂದು ಭಾವಿಸಬಾರದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಶೀಶಾನಂದ ಈ ರೀತಿ ಹೇಳಿದರು. ಖಂಡಿತಾ ಇಲ್ಲ. ಅದೆಲ್ಲವೂ ಈಗ ಮುಗಿದ ಅಧ್ಯಾಯ. ಯಾವುದೇ ಹಿನ್ನಡೆ ಆಗಿಲ್ಲ. ಮುಕ್ತ ನ್ಯಾಯಾಲಯದಲ್ಲಿ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸುವ ಉದ್ದೇಶವನ್ನು ನಾನು ನಿಲ್ಲಿಸುತ್ತೇನೆ. ನಾನೇಕೆ ಅದನ್ನು ಮಾಡಬೇಕು. ನಾನು ಇಲ್ಲಿ ನ್ಯಾಯಮೂರ್ತಿಯ ಕೆಲಸ ನಿಭಾಯಿಸಬೇಕು. ಅದನ್ನು ಮಾಡುತ್ತೇನೆ. ನಮ್ಮ ಕೆಲವು ಸ್ನೇಹಿತರಿಗೆ ಕಾನೂನು ತತ್ವದ ಶಿಕ್ಷಣ ಅಗತ್ಯವೆನಿಸಿದರೆ ಅವರು ಉಪನ್ಯಾಸ ಕಾರ್ಯಕ್ರಮ ಆಯೋಜಿಸಬಹುದು. ನಾನು ಅಲ್ಲಿಗೆ ತೆರಳಿ ಮಾತನಾಡುತ್ತೇನೆ ಎಂದು ಹೇಳಿದರು.
ಆಗ ವಕೀಲರೊಬ್ಬರು, ನ್ಯಾಯಾಧೀಶರ ಜ್ಞಾನ ವ್ಯರ್ಥವಾಗಬಾರದು. ನೀವು ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದಾಗಲೇ ನಾನು ಇಂಟರ್ನಿಯಾಗಿದ್ದೆ. ಆಗಲೇ ನಾನು ನಿಮ್ಮ ಮಾತುಗಳನ್ನು ಆಲಿಸಿದ್ದೇನೆ. ಆಗ ನೀವು ಹೇಳಿದ್ದು ಈಗಲೂ ನಮ್ಮ ಸಹಾಯಕ್ಕೆ ಬರುತ್ತಿದೆ ಎಂದು ಹೊಗಳಿಕೆಯ ಮಾತನಾಡಿದರು.
ಇದಕ್ಕೆ ಉತ್ತರಿಸಿದ ನ್ಯಾ. ಶ್ರೀಶಾನಂದ ಅವರು, ನ್ಯಾಯಾಲಯದಲ್ಲಿ ಹೇಳಿದ್ದನ್ನು ಜನರು ತಿರುಚಿ ಹೇಳಿದಾಗ, ಅದಕ್ಕೆ ನಾವು ಅವಕಾಶವನ್ನೇಕೆ ಕೊಡಬೇಕು? ಪ್ರಕರಣಕ್ಕೆ ಏನು ಬೇಕಿದೆ ಅದನ್ನು ಖಂಡಿತಾ ನ್ಯಾಯಾಲಯ ನಿರ್ಧರಿಸಲಿದೆ. ಅದನ್ನು ನಿಲ್ಲಿಸುವುದಿಲ್ಲ. ಜ್ಞಾನ ಹಂಚಿಕೊಳ್ಳಲು ಇತರೆ ವೇದಿಕೆಗಳಿವೆ. ಅಲ್ಲಿ ಅದನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.
ನ್ಯಾಯಮೂರ್ತಿಯಾಗಿ ನಿರ್ದಿಷ್ಟ ವಿಧಾನದಲ್ಲಿ ನಾನು ಕೆಲಸ ಮಾಡಲು ನನ್ನನ್ನು ಯಾರೂ ನಿರ್ಬಂಧಿಸಲಾಗದು. ಎರಡು ಮೂರು ದಿನಗಳ ಟ್ರಾಮ, ಮಾನಸಿಕ ನೋವು... ಅದು ನನಗೆ ಅಗತ್ಯವೇ..? ಯಾರಿಗಾದರೂ ಜ್ಞಾನ ಬೇಕಾದರೆ ಆನ್‌ಲೈನ್ ಉಪನ್ಯಾಸ ನೀಡೋಣ. 15 ದಿನ ಅಥವಾ ತಿಂಗಳಿಗೆ ಒಮ್ಮೆ ನಿರ್ದಿಷ್ಟ ವಿಚಾರಗಳ ಬಗ್ಗೆ ಚರ್ಚೆ ನಡೆಸೋಣ. ಆದರೆ, ತೆರೆದ ನ್ಯಾಯಾಲಯದಲ್ಲಲ್ಲ. ಪ್ರಕರಣ ಏನಿದೆ.. ಅದನ್ನು ನೋಡಿ ಅಲ್ಲಿಯೇ ಆದೇಶ ಮಾಡುತ್ತೇನೆ. ಅನಗತ್ಯವಾಗಿ ಇದೆಲ್ಲ ಏಕೆ..? ನನ್ನ ಬಗ್ಗೆ ಗೊತ್ತಿರುವವರು ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ವಿವರಣೆ ನೀಡಿದರು.