ದುಬಾರಿಯಾದ ಡೇಟಿಂಗ್ ಆಪ್‌ನ ಅನಾಮಿಕ ಫ್ರೆಂಡ್ ಜೊತೆಗೆ ಸ್ನೇಹ: ವಂಚನೆಯ ಅರಿವಾದದ್ದು ಕೋಟಿ ಕಳೆದುಕೊಂಡ ಮೇಲೆ...!
ದುಬಾರಿಯಾದ ಡೇಟಿಂಗ್ ಆಪ್‌ನ ಅನಾಮಿಕ ಫ್ರೆಂಡ್ ಜೊತೆಗೆ ಸ್ನೇಹ: ವಂಚನೆಯ ಅರಿವಾದದ್ದು ಕೋಟಿ ಕಳೆದುಕೊಂಡ ಮೇಲೆ...!
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಮಂಗ ಮಾಡಲು ಒಂದಲ್ಲ ಒಂದು ರೀತಿಯಲ್ಲಿ ವಂಚಕರು ಹೊಂಚು ಹಾಕುತ್ತಿದ್ದಾರೆ. ಇದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ ಒಂದು "ಡೇಟಿಂಗ್ ಆ್ಯಪ್"ನ ಬಲೆ ಹೆಣೆದ ವಂಚಕರು ಅನಾಮಿಕ ಫ್ರೆಂಡ್ ವೊಬ್ಬರುನ್ನು ಮುಂದಿಟ್ಟು ಕೋಟಿ ರೂಪಾಯಿಯನ್ನು ಬೋಳಿಸಿದ್ದಾರೆ.
ಜೊಲ್ಲು ಸುರಿಸಿಕೊಂಡು ವಂಚಕರ ಬಲೆಗೆ ಬಿದ್ದ ಅಮಾಯಕರೊಬ್ಬರು ಬರೋಬ್ಬರು 1.12 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಘಟನೆಯ ವಿವರ:
ಜೂನ್ 28ರಂದು ಟೆಲಿಗ್ರಾಂ ಆ್ಯಪ್‌ನಲ್ಲಿ ಲೀನಾ ಜೋಸ್ ಎಂಬ ಹೆಸರಿನಲ್ಲಿ ನೀಡಲಾದ ಫ್ರೆಂಡ್ ರಿಕ್ವೆಸ್ಟ್‌ಗೆ ಬಜಪೆ ನಿವಾಸಿ ನಾಗೇಶ್ ಎಂಬವರು ಸ್ಪಂದಿಸಿದರು. ಆ್ಯಪ್ ಮೂಲಕ ಆ ಬಳಿಕ ಟೆಲಿಗ್ರಾಂ ಆ್ಯಪ್ ಮೂಲಕ ಚಾಟಿಂಗ್ ಆರಂಭಿಸಿದರು. ಕೆಲವು ದಿನಗಳ ಬಳಿಕ ಲೀನಾ ಜೋಸ್ ಎಂಬುದಾಗಿ ಪ್ರತಿನಿಧಿಸಿದ್ದ ಆಕೆ ನಾಗೇಶ್ ಅವರನ್ನು ಟ್ರೇಡಿಂಗ್‌ನಲ್ಲಿಹಣ ಹೂಡುವಂತೆ ಪುಸಲಾಯಿಸಿದರು.
ಲೀನಾ ಜೋಸ್ ಎಂಬ ಹೆಸರಿನ ಸೋಗಿನಲ್ಲಿದ್ದ ಡೇಟಿಂಗ್ ಆಪ್ ವಂಚಕರು ಬಣ್ಣದ ಮಾತುಗಳನ್ನಾಡಿದರು. ಇಲ್ಲಿ ಹಣ ಹೂಡಿದರೆ ಕೋಟ್ಯಂತರ ರೂಪಾಯಿ ಗಳಿಸಬಹುದು ಎಂದು ನಂಬಿಸಿದರು. ಇದಕ್ಕೆ ಒಪ್ಪಿಕೊಂಡ ನಾಗೇಶ್ ಅವರು "ವೇವ್ ಜಿ.ಪಿ. ಟೆಕ್ಷಾ" ಎಂಬ ಆ್ಯಪ್‌ನ್ನು ಡೌನ್ ಲೋಡ್ ಮಾಡಿದರು.
ಈ ಆ್ಯಪ್ ಮೂಲಕ ಆರಂಭದಲ್ಲಿ ರೂ. 50000/- ಹೂಡಿದರು. ಇದಾದ ನಂತರ, ಹಣ ಕ್ಷಿಪ್ರಗತಿಯಲ್ಲಿ ಬೆಳೆಯುತ್ತದೆ, ಲಾಭ ಸಿಗುತ್ತದೆ, ರಾತ್ರೋರಾತ್ರಿ ಆಗರ್ಭ ಶ್ರೀಮಂತನಾಗಬಹುದು ಎಂಬ ಆಶೆಯಿಂದ ಹಲವು ಖಾತೆಗಳಿಂದ 10 ಲಕ್ಷ ರೂಪಾಯಿಗಳನ್ನು ಈ ಆ್ಯಪ್‌ನಲ್ಲಿ ವಿನಿಯೋಗಿಸಿದರು. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿದ ತಕ್ಷಣ ಅವರ ಖಾತೆಯಲ್ಲಿ 80 ಲಕ್ಷ ರೂಪಾಯಿ ಜಮೆ ಆಗಿದೆ ಎಂಬ ಸಂದೇಶ ಕೆಲವೇ ಹೊತ್ತಿನಲ್ಲಿ ಬಂದುಬಿಟ್ಟಿತು. ಇದನ್ನು ನಂಬಿ ನಾಗೇಶ್ ಖುಷಿಯಿಂದ ತೇಲಾಡಿ ಹೋದರು.
ಲಾಭಾಂಶ ಸೇರಿ ದೊಡ್ಡ ಮೊತ್ತದ ಹಣ ಜಮೆಯಾದ ನಂತರ ಅದನ್ನು ತೆಗೆಯಲು ನಾಗೇಶ್ ಪ್ರಯತ್ನ ನಡೆಸಿದರು. ಆಗ, ಶೇಕಡಾ 30ರಷ್ಟು ತೆರಿಗೆ ಪಾವತಿಸಬೇಕು. ಅದನ್ನು ನಿರ್ದಿಷ್ಟ ಖಾತೆಗೆ ತುಂಬುವಂತೆ ವಂಚಕರು ಆ್ಯಪ್‌ನಲ್ಲಿ ಸೂಚಿಸಿದರು.
ಆ ಸೂಚನೆಯ ಪ್ರಕಾರ ನಾಗೇಶ್, 19.26 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಂದ ಜಮೆ ಮಾಡಿದರು. ಆಗ ಡಾಲರ್ ಮೊತ್ತವನ್ನು ರೂಪಾಯಿಗೆ ಕನ್ವರ್ಟ್ ಮಾಡಲು ಶೇಕಡಾ 10ರಷ್ಟು ಶುಲ್ಕ ಭರಿಸುವಂತೆ ವಂಚಕರು ಸೂಚಿಸಿದರು. ಅದರಂತೆ, ಮತ್ತೆ 7.36 ಲಕ್ಷ ರೂ.ಗಳನ್ನು ಅವರು ಜಮೆ ಮಾಡಿದರು.
ಇನ್ನೇನು ಕೋಟಿ ರೂ. ನನ್ನ ಕೈ ಸೇರಲಿದೆ ಎಂದು ನಾಗೇಶ್ ಖುಷಿಪಟ್ಟರು. ಇದಾಗಿ, 50 ಲಕ್ಷ ರೂಪಾಯಿ ವಿತ್‌ಡ್ರಾ ಮಾಡಲು ಮುಂದಾದಾಗ, ಆ್‌ಯಪ್‌ನ ರಿಸ್ಕ್ ಕಂಟ್ರೋಲ್ ವಿಭಾಗದಲ್ಲಿ ಹಣವನ್ನು ತಡೆ ಹಿಡಿಯಲಾಗಿದೆ. ಶೇಕಡಾ 50ರಷ್ಟು ಹೂಡಿಕೆ ಇದ್ದರೆ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಸಂದೇಶ ಬಂತು.
ಇದನ್ನು ನಂಬಿದ ನಾಗೇಶ್ ಮತ್ತೆ 26.84 ಲಕ್ಷ ರೂ.ಗಳನ್ನು ಜಮೆ ಮಾಡಿದರು. ಆ ಬಳಿಕ ಹಣವನ್ನು ಪಡೆಯಲು ಪ್ರಯತ್ನ ನಡೆಸಿದಾಗ ವಿವಿಧ ನಮೂನೆಯ ಬೇಡಿಕೆಗಳು ಮತ್ತಷ್ಟು ಹಣ ಜಮೆ ಮಾಡಲು ಬೇಡಿಕೆ ಶುರುವಾಯಿತು. ಸ್ಕೋರ್ ಹೆಚ್ಚಿಸಲು ಮತ್ತು ವಿಐಪಿ ಗ್ರಾಹಕರಾಗಲು ಮತ್ತಷ್ಟು ಹೂಡಿಕೆ ಮಾಡುವಂತೆ ವಂಚಕರು ಸೂಚಿಸಿದ್ದಾರೆ.
ಇದರಿಂದ ಸಂದೇಹಗೊಂಡ ನಾಗೇಶ್ ತನ್ನ ಸ್ನೇಹಿತರಿಗೆ ಈ ವಿಷಯ ತಿಳಿಸಿದರು. ಆಗಲೇ ಅವರು ವಂಚಕರು ಎಸೆದ ಬಲೆಗೆ ಬಿದ್ದಿರುವುದು ಗೊತ್ತಾಗಿದೆ. ಅಷ್ಟು ಹೊತ್ತಿಗೆ ಅವರು ಒಟ್ಟು 1.13 ಕೋಟಿ ರೂ.ಗಳನ್ನು ವಂಚಕರು ತಿಳಿಸಿದ ಅಕೌಂಟಿಗೆ ಜಮೆ ಮಾಡಿ ಹಣವನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ನಾಗೇಶ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿ ಈ ಎಲ್ಲ ವಿಷಯವನ್ನು ನಾಗೇಶ್ ತಮ್ಮ ದೂರಿನಲ್ಲಿ ವಿವರವಾಗಿ ತಿಳಿಸಿದ್ಧಾರೆ.
ದಯವಿಟ್ಟು ಯಾರೂ ರಾತೋರಾತ್ರಿ ಶ್ರೀಮಂತರಾಗುತ್ತೇವೆ ಎಂದು ಹೇಳಿ ಗೊತ್ತು ಪರಿಚಯ ಇಲ್ಲದ ವ್ಯಕ್ತಿಗಳಿಗೆ ಹಣ ನೀಡುವುದು, ಓಟಿಪಿ ನೀಡುವುದು ಮಾಡಬೇಡಿ.. ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲೇ ಇದೆ. ಅತ್ಯಂತ ಪ್ರಶಾಂತ ಮನಸ್ಸಿನಿಂದ ಆಲೋಚನೆ ಮಾಡಿ... ಬುದ್ದಿವಂತಿಗೆ ಉಪಯೋಗಿಸಿ...