-->
2014ರ ಮರಕುಂಬಿ ದಲಿತರ ದೌರ್ಜನ್ಯ ಪ್ರಕರಣ: 98 ಮಂದಿಗೆ ಜೀವಾವಧಿ ಶಿಕ್ಷೆ- ಕೊಪ್ಪಳ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದ ಐತಿಹಾಸಿಕ ತೀರ್ಪು

2014ರ ಮರಕುಂಬಿ ದಲಿತರ ದೌರ್ಜನ್ಯ ಪ್ರಕರಣ: 98 ಮಂದಿಗೆ ಜೀವಾವಧಿ ಶಿಕ್ಷೆ- ಕೊಪ್ಪಳ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದ ಐತಿಹಾಸಿಕ ತೀರ್ಪು

2014ರ ಮರಕುಂಬಿ ದಲಿತರ ದೌರ್ಜನ್ಯ ಪ್ರಕರಣ: 98 ಮಂದಿಗೆ ಜೀವಾವಧಿ ಶಿಕ್ಷೆ- ಕೊಪ್ಪಳ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದ ಐತಿಹಾಸಿಕ ತೀರ್ಪು





2014ರಲ್ಲಿ ನಡೆದಿದ್ದ ಅಮಾನವೀಯ ಮರಕುಂಬಿ ಮನೆಗಳ ಧ್ವಂಸ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ 5000 ರೂ. ದಂಡದ ಶಿಕ್ಷೆ ಪ್ರಕಟಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಉಳಿದ ಮೂವರು ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 2000 ರೂ. ದಂಡ ವಿಧಿಸಲಾಗಿದೆ.


ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.


2014ರಲ್ಲಿ ಸಿನಿಮಾ ಟಾಕೀಸ್‌ನಲ್ಲಿ ಗಂಗಾವತಿಯ ಮಂಜುನಾಥ್ ಅವರು ಟಿಕೆಟ್ ಖರೀದಿಸುವ ವೇಳೆ ಇನ್ನೊಂದು ಗುಂಪಿನ ಜೊತೆಗೆ ಗಲಾಟೆ ಮಾಡಿಕೊಂಡು ಥಳಿಸಿಕೊಂಡಿದ್ದರು. ಈ ಪ್ರಕರಣದ ಹಿಂದೆ ಮರಕುಂಬಿ ಗ್ರಾಮದ ದಲಿತರ ಕೈವಾಡ ಇದೆ ಎಂದು ಭಾವಿಸಿದ ಮಂಜುನಾಥ್ ಊರಿನಲ್ಲಿ ಈ ವಿಷಯ ತಿಳಿಸಿದ್ದರು.


ಆ ಬಳಿಕ, ಮಂಜುನಾಥ್ ಮತ್ತು ಇತರರು ಮರಕುಂಬಿಯ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಬಗ್ಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಗ್ರಾಮಸ್ಥರ ಮೇಲೆ ಕಲ್ಲು, ಇಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು.


ಈ ಬಗ್ಗೆ ದಲಿತ ಸಮುದಾಯದ ಸಂತ್ರಸ್ತರಾದ ಶ್ರೀ ಭೀಮಯ್ಯ ಅವರು ನೀಡಿದ ದೂರಿನ ಮೇರೆಗೆ ಗಂಗಾವತಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಾತಿ ನಿಂದನೆ, ಮಹಿಳೆಯರ ಘನತೆಗೆ ಹಾನಿ, ಮನೆಗಳಿಗೆ ಬೆಂಕಿ ಹಚ್ಚಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪವನ್ನು ಹೊರಿಸಿ 117 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.


ಇಂತಹ ಪ್ರಕರಣಗಳಲ್ಲಿ ಅನುಕಂಪ ತೋರುವುದು ನ್ಯಾಯದ ವಿಡಂಬನೆಯಾಗಲಿದೆ. ಈ ಅಮಾನವೀಯ ಕೃತ್ಯಕ್ಕೆ ಉಲ್ಲೇಖಿತ ಕನಿಷ್ಟ ಶಿಕ್ಷೆಗಿಂತ ಹೆಚ್ಚು ಶಿಕ್ಷೆ ವಿಧಿಸಬೇಕಿದೆ. ಕಡಿಮೆ ಶಿಕ್ಷೆ ವಿಧಿಸಲು ಯಾವುದೇ ಸಮರ್ಥ ಅಥವಾ ಸೂಕ್ತ ಕಾರಣಗಳು ದೊರೆಯುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.


ಪ್ರರಕಣದಲ್ಲಿ 2-3 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಯಾಗಿ ಬದಲಾದರು. ಆದರೂ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಬೆದರಿಕೆ, ಮನವೊಲಿಕೆ ಕಾರಣದಿಂದ ಸಾಕ್ಷಿಗಳು ಪ್ರಾಸಿಕ್ಯೂಷನ್‌ ಗೆ ಬೆಂಬಲ ನೀಡಲಿಲ್ಲ.


ಮರಕುಂಬಿಯಲ್ಲಿ 2014ರ ಆಗಸ್ಟ್ 28ರಂದು ದಲಿತರ ಮೇಲೆ ಹಲ್ಲೆಯಾಗಿದೆ ಎಂಬುದಕ್ಕೆ ವೈದ್ಯರು ದೃಢಪಡಿಸಿದ ಗಾಯದ ಪ್ರಮಾಣಪತ್ರ ಸಾಕ್ಷಿ ಒದಗಿಸಿದೆ. ಪ್ರಕರಣದಲ್ಲಿ ಲಭ್ಯವಿರುವ ಮೌಖಿಕ ಹಾಗೂ ದಾಖಲೆಯ ಸಾಕ್ಷಿಗಳು ಆರೋಪಗಳ ಕೃತ್ಯವನ್ನು ಸಾಬೀತುಪಡಿಸಲು ಸಾಕಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸಂತ್ರಸ್ತರು ಟ್ರ್ಯಾಕ್ಟರ್‌ನಿಂದ ಬಿದ್ದು ಗಾಯಗೊಂಡಿರಬಹುದು ಎಂಬ ಆರೋಪಿತರ ಪರ ವಾದವನ್ನು ಪುರಸ್ಕರಿಸಲಿಲ್ಲ.


ದೂರುದಾರ ಭೀಮಯ್ಯ ಅವರು ನೀಡಿರುವ ಹೇಳಿಕೆಗೂ ಗಾಯಾಳುಗಳಾಗಿರುವ ಸಾಕ್ಷಿಗಳು ನೀಡಿರುವ ಹೇಳಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ಗಾಯಾಳು ಸಾಕ್ಷಿಗಳು ಒದಗಿಸಿರುವ ಸಾಕ್ಷಿಗೆ ತನ್ನದೇ ಆದ ಮೌಲ್ಯವಿದೆ. ಸಣ್ಣ-ಪುಟ್ಟ ದೋಷ, ಮೌಖಿಕ ಸಾಕ್ಷಿ ನುಡಿಯುವಾಗ ವ್ಯತ್ಯಯವಾಗಿದೆ ಎಂದು ಸಾರಾಸಗಟಾಗಿ ಬದಿಗೆ ಸರಿಸಲಾಗದು. ಸಾಕ್ಷಿಗಳೆಲ್ಲರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದಾರೆ. ಅವರೆಲ್ಲರೂ ಅನಕ್ಷರಸ್ಥರು ಮತ್ತು ತಿಳುವಳಿಕೆ ಇಲ್ಲದವರು. ಅವರಿಗೆ ಜಗತ್ತಿನ ಬಗೆಗೆ ಸಮಗ್ರ ಜ್ಞಾನ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಪ್ರಕರಣ: ಗಂಗಾವತಿ ಗ್ರಾಮಾಂತರ ಪೊಲೀಸ್ Vs ಮಂಜುನಾಥ್ ಮತ್ತಿತರರು

ಪ್ರಧಾನ ಜಿಲ್ಲಾ ಮತ್ತು ಸತ್ರ/ವಿಶೇಷ ನ್ಯಾಯಾಲಯ SC (A.C.) No. 12/2015 Dated 21-10-2024



Ads on article

Advertise in articles 1

advertising articles 2

Advertise under the article